ನಾಪೋಕ್ಲು ಅ.19 NEWS DESK : ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವದ ಎರಡನೇ ದಿನ ಇತಿಹಾಸ ಪ್ರಸಿದ್ಧ ಬಲಮುರಿಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಸಂಕ್ರಮಣದ ಪ್ರಯುಕ್ತ ಕಾವೇರಿ ನದಿಗೆ ಮಹಾ ಮಂಗಳಾರತಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿತು. ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿದವು. ನಂತರ ಕೇಶ ಮುಂಡನ, ಪಿಂಡಪ್ರಧಾನ, ಕಾವೇರಿ ತೀರ್ಥಸ್ನಾನ, ಕಾವೇರಿಯ ಬಾಳೋಪಾಟ್ ಮತ್ತಿತರ ಕಾರ್ಯಗಳು ನಡೆಯಿತು. ಮಧ್ಯಾಹ್ನ ಕಾವೇರಿ ನದಿಗೆ ಮಹಾ ಮಂಗಳಾರತಿಯನ್ನು ಅರ್ಚಕ ಮಹಾಬಲೇಶ್ವರ ಭಟ್ ಸಹವರ್ತಿಗಳು ನೆರವೇರಿಸಿದರು. ಬಳಿಕ ನದಿಯಿಂದ ಪವಿತ್ರ ನೀರನ್ನು ದೇವಾಲಯಕ್ಕೆ ತಂದು ದೇವರ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಯಿತು. ವಿಶೇಷ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನೆರವೇರಿತು. ಈ ಸಂದರ್ಭ ದೇವಾಲಯದ ತಕ್ಕರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ, ಕಾರ್ಯದರ್ಶಿ ನ್ನಚ್ಚನ ಜಯ, ಅನ್ನದಾನ ಸಮಿತಿಯ ಅಧ್ಯಕ್ಷ ಬೊಳ್ಳಚೆಟ್ಟಿರ ಚೆಟ್ಟಿಚ್ಚ, ಕಾರ್ಯದರ್ಶಿ ಪಾಲಂದಿರ ಚಂಗಪ್ಪ, ನಿರ್ದೇಶಕರುಗಳಾದ ತೊತ್ತಿಯಂಡ ಪುಟ್ಟಯ್ಯ, ಕಟ್ರತನ ಉತ್ತಪ್ಪ, ಪೊನ್ನಚ್ಚನ ಹೊನ್ನಪ್ಪ, ಕಾಂಗೀರ ಮಾದಪ್ಪ, ಪಾಲಂದಿರ ನಾಚಪ್ಪ, ಬೊಳ್ಳಚೆಟ್ಟಿರ ಸುರೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಚುನಾಯಿತ ಪ್ರತಿನಿಧಿಗಳುಹಾಗೂ ಹಾಜರಿದ್ದರು. ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಹಾಗೂ ಮೂರ್ನಾಡು, ನಾಪೋಕ್ಲು ಹೋಬಳಿ ಕಸಾಪ, ಮಹಾದೇವ ಸ್ಪೋಟ್ರ್ಸ್ ಕ್ಲಬ್ ಬಲಮುರಿ ಸಂಯುಕ್ತಾಶ್ರಯದಲ್ಲಿ ರವಿ ಓಂಕಾರ್ ಮ್ಯೂಸಿಕ್ ನಾಪೋಕ್ಲು ಹಾಗೂ ಸ್ಥಳೀಯ ಕಲಾವಿದರಿಂದ ಭಕ್ತಿ ಗೀತೆ ಗಾಯನ ಕಾರ್ಯಕ್ರಮಗಳನ್ನು ನಡೆಸಲಾಯಿತು.
ವರದಿ : ದುಗ್ಗಳ ಸದಾನಂದ.