ಮಡಿಕೇರಿ ಅ.21 NEWS DESK : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನಿಮಾ)ನ ಕೊಡಗು ಜಿಲ್ಲಾ ಘಟಕ ಹಾಗೂ ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅ.29 ರಂದು ಮೇಕೇರಿ ಗ್ರಾಮದ ಶ್ರೀ ಸತ್ಯಸಾಯಿ ಮಂದಿರದಲ್ಲಿ ‘ರಾಷ್ಟ್ರೀಯ ಆಯುರ್ವೇದ ದಿನಾಚರಣೆ’ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ನಿಮಾ ಅಧ್ಯಕ್ಷ ಡಾ.ಎ.ಆರ್.ರಾಜಾರಾಂ ಅವರು ಈ ಕುರಿತು ಮಾಹಿತಿ ನೀಡಿ, ‘ಆಧುನಿಕತೆಯಲ್ಲಿ ಆಯುರ್ವೇದ’ ಎನ್ನುವ ಘೋಷವಾಕ್ಯದೊಂದಿಗೆ ನಡೆಯುವ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಂದು ಬೆಳಗ್ಗೆ 9.30 ಕ್ಕೆ ಧನ್ವಂತರಿ ಹವನದ ಬಳಿಕ ನುರಿತ ಆಯುರ್ವೇದ ವೈದ್ಯರೊಂದಿಗೆ ಸಾರ್ವಜನಿಕರ ಸಂವಾದ ಕಾರ್ಯಕ್ರಮ, ಆಯುರ್ವೇದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯ ವೈದ್ಯರಿಗೆ ಸನ್ಮಾನ ಮತ್ತು ಉಚಿತ ಆಯುರ್ವೇದ ತಪಾಸಣಾ ಶಿಬಿರ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು, ಮಡಿಕೇರಿ ತಾಲ್ಲೂಕು ಶಾಸಕರಾದ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ರಾಮರಾಜನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬೆಳ್ಳಿ ಹಬ್ಬಕ್ಕೆ ಚಾಲನೆ :: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ನ ಕೊಡಗು ಜಿಲ್ಲಾ ಘಟಕ ಇಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಇದೇ ಸಂದರ್ಭ ಬೆಳ್ಳಿ ಹಬ್ಬದ ಆಚರಣೆಗೆ ಚಾಲನೆ ನೀಡಲಾಗುತ್ತದೆ. ಮುಂದಿನ ಒಂದು ವರ್ಷಗಳ ಕಾಲ ವಿವಿಧ ಸ್ತರಗಳಲ್ಲಿ ಸಾರ್ವಜನಿಕರಿಗೆ ಆಯುರ್ವೇದ ಹಾಗೂ ಇನ್ನಿತರ ಭಾರತೀಯ ವೈದ್ಯ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆಂದು ಡಾ.ರಾಜಾರಾಂ ತಿಳಿಸಿದರು.
ಸಾರ್ವಜನಿಕರಿಗೆ ಸೆಲ್ಫಿ ಸ್ಪರ್ಧೆ :: ಆಯುರ್ವೇದ ದಿನಾಚರಣೆ ಅಂಗವಾಗಿ ‘ಹಿತ್ತಲ ಮದ್ದಿನ ಗಿಡಗಳೊಂದಿಗೆ ಸೆಲ್ಫಿ’ ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಿರಿಯರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಎನ್ನುವ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಮದ್ದಿನ ಗಿಡದ ಹೆಸರು ಹಾಗೂ ಅದರ ಎದುರು ತಮ್ಮ ಸೆಲ್ಪಿಯನ್ನು ತೆಗೆದು ಮೊ. 9886266120 ಈ ಸಂಖ್ಯೆಗೆ ಅ.28ರ ವರೆಗೆ ಕಳುಹಿಸಿಕೊಡಬಹುದು. ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ನೀಡಲಾಗುವುದೆಂದರು. ಸುದ್ದಿಗೋಷ್ಠಿಯಲ್ಲಿ ಆಯುಷ್ ಇಲಾಖಾ ಅಧಿಕಾರಿ ಡಾ. ಶೈಲಜಾ, ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಅಧ್ಯಕ್ಷರಾದ ಸೋಮಣ್ಣ ಹಾಗೂ ಸಂಚಾಲಕ ಗಜರಾಜ ನಾಯ್ಡು ಉಪಸ್ಥಿತರಿದ್ದರು.