ಮಡಿಕೇರಿ ಅ.23 NEWS DESK : ನಗರದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಭವ್ಯ ವೇದಿಕೆ ನಿರ್ಮಿಸುವುದಕ್ಕೆ ಹೆಚ್ಚಿನ ಹಣ ವ್ಯಯವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 2 ಕೋಟಿ ವೆಚ್ಚದಲ್ಲಿ ಶಾಶ್ವತವಾದ ಸುಸಜ್ಜಿತ ಭವ್ಯ ವೇದಿಕೆ ನಿರ್ಮಿಸಲು ನಗರಸಭಾ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ನಗರಸಭೆಯ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆಯ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಗಾಂಧಿ ಮೈದಾನದಲ್ಲಿ ಪ್ರಸ್ತುತ ಇರುವ ರಂಗ ಮಂದಿರವನ್ನು ಕೆಡವಿ ನೂತನ ರಂಗ ಮಂದಿರ ನಿರ್ಮಾಣ, ಕಲಾವಿದರ ಅನುಕೂಲಕ್ಕಾಗಿ ಗ್ರೀನ್ ರೂಂ, ವೇದಿಕೆಯ ಎರಡು ಬದಿಗಳಲ್ಲಿ ಗ್ಯಾಲರಿ, ಹಣ ಪಾವತಿಸಿ ಬಳಸುವ ಶೌಚಾಲಯ ನಿರ್ಮಾಣ, ಹಣ ಪಾವತಿಸಿ ಬಳಸುವ ವಾಹನ ನಿಲುಗಡೆ ಸ್ಥಳ ಮತ್ತು ವೈದ್ಯಕೀಯ ಸಹಾಯ ಕೇಂದ್ರ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಉದ್ದೇಶಿತ ನೂತನ ರಂಗ ಮಂದಿರ, ವಾಹನ ನಿಲುಗಡೆ ಸ್ಥಳಗಳನ್ನು ನಗರಸಭೆ ತನ್ನ ವಿವೇಚನೆಯಂತೆ ವರ್ಷ ಪೂರ್ತಿ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ಕಾರ್ಯಕ್ರಮಗಳ ಆಯೋಜನೆಗೆ ಬಾಡಿಗೆಯನ್ನು ನಿಗದಿ ಪಡಿಸಿ ಕೊಡಲು ಅವಕಾಶವಿದೆ. ಇದರಿಂದ ನಗರಸಭೆಗೂ ಆರ್ಥಿಕ ಕ್ರೋಢೀಕರಣವಾಗಲಿದೆಯೆಂದು ಅಭಿಪ್ರಾಯಿಸಿ, ಇಂತಹ ರಂಗ ಮಂದಿಗಳಿಂದ ಜಿಲ್ಲೆಯ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಡಲು ಸಹಕಾರಿಯಾಗುತ್ತದೆ. ನಗರಸಭೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ನಿಗದಿಯಾಗಿರುವ ಎಂಟರ್‍ಪ್ರೈಸಿಂಗ್ ನಿಧಿಯಲ್ಲಿ 7.33 ಕೊಟಿ ರೂ.ಗಳಿದ್ದು, ಇದರಲ್ಲಿ 2 ಕೋಟಿ ರೂ.ಗಳನ್ನು ನೂತನ ರಂಗಮಂದಿರಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ನಗರಸಭಾ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಪ್ರತಿ ವರ್ಷ ದಸರ ಸಂದರ್ಭ ವೇದಿಕೆ ನಿರ್ಮಾಣಕ್ಕೆ ಸುಮಾರು 35 ಲಕ್ಷ ರೂ.ಗಳ ಹೊರೆ ಬೀಳುತ್ತಿದೆ. ನೂತನ ರಂಗಮಂದಿರವನ್ನು ವ್ಯವಸ್ಥಿತವಾಗಿ ನಿರ್ಮಿಸಿದಲ್ಲಿ ಈ ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಈ ಹಿನ್ನೆಲೆ ನಗರಸಭೆಯ ನಿಧಿಯಿಂದ ಹೆಚ್ಚಿನ ಹಣವನ್ನು ಬೇಕಿದ್ದಲ್ಲಿ ಬಳಸುವ ಮೂಲಕ ರಂಗ ಮಂದಿರ ಉತ್ತಮ ರೀತಿಯಲ್ಲಿ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು. ಗಾಂಧಿ ಮೈದಾನದಲ್ಲಿ ವ್ಯವಸ್ಥಿತ ಮತ್ತು ಶಾಶ್ವತ ರಂಗ ಮಂದಿರ ನಿರ್ಮಾಣದೊದಿಗೆ, ಪ್ರಸ್ತುತ ಇರುವ ಕಾವೇರಿ ಕಲಾಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ಪುನರ್ ನಿರ್ಮಾಣ ಮಾಡುವ ಮೂಲಕ, ನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಒದಗಿಸಿಕೊಡುವ ಮೂಲಕ ಮಡಿಕೇರಿಯನ್ನು ‘ಸಾಂಸ್ಕೃತಿಕ ಕೇಂದ್ರ’ವನ್ನಾಗಿ ಮಾಡಬೇಕೆಂದರು. ಪ್ರಸ್ತುತ ಸುದರ್ಶನ ವೃತ್ತದಿಂದ ಗಾಂಧಿ ಮೈದಾನದ ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಫುಟ್ ಪಾತ್ ಇಲ್ಲ. ಈ ಹಿನ್ನೆಲೆ ವ್ಯವಸ್ಥಿತವಾದ ಮತ್ತು ಆಧುನಿಕ ರೀತಿಯ ಫುಟ್ ಪಾತ್ ನಿರ್ಮಾಣದ ಪ್ರಯತ್ನವೂ ನಡೆಯುತ್ತಿದೆ. ಇದು ಕಾರ್ಯಗತಗೊಂಡಲ್ಲಿ ಮಡಿಕೇರಿಯ ಆಕರ್ಷಣೆಯೂ ಹೆಚ್ಚಲಿದೆ ಎಂದು ತಿಳಿಸಿದರು.
::: ಪ್ಲಾಸ್ಟಿಕ್ ಬಾಟಲಿ :::
ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳ ತ್ಯಾಜ್ಯ ಮಿತಿ ಮೀರಿರುವ ವಿಚಾರ ಪ್ರಸ್ತಾಪವಾಗಿ ಇದಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾಧಿಕಾರಿಗಳು ಮಾತನಾಡಿ, 2 ಲೀ. ನೀರಿನ ಬಾಟಲಿಗಿಂತ ಕೆಳಗಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸುವ ಮತ್ತು ಪ್ಲಾಸ್ಟಿಕ್ ಬಾಟಲಿ ಬಳಸಿ ಒಗೆಯುವವರ ವಿರುದ್ಧ ದಂಡ ವಿಧಿಸಲು ನಗಸಭೆ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿದರು. ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಪರಿಶಿಷ್ಟರಿಗೆ ಮೀಸಲಾದ ಶೇ.24ರ ಹಣದಲ್ಲಿ ಚಿಕ್ಕಾಸು ಹಣವು ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಿಲ್ಲವೆಂದು ಸದಸ್ಯ ಮನ್ಸೂರ್ ಅಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲವೆಂದರು. ಸದಸ್ಯ ಅಪ್ಪಣ್ಣ ಮಾತನಾಡಿ ದಸರಾ ಸಂದರ್ಭ ದೇವಸ್ಥಾನಗಳಿಗೆ ತೆರಳುವ ರಸ್ತೆಗಳ ಗುಂಡಿ ಮುಚ್ಚಲಾಗಿದೆ. ಉಳಿದ ಬಡಾವಣೆಗಳಲ್ಲಿ ಇಂದಿಗೂ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿದ್ದು, ದುರಸ್ತಿ ಕಾರ್ಯ ನಡೆಸಿಕೊಡುವಂತೆ ಕೋರಿದರು. ನಗರ ವ್ಯಾಪ್ತಿಯ ಸಾಕಷ್ಟು ಬಡಾವಣೆಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ತಗುಲುವ ವೆಚ್ಚ ಹೆಚ್ಚಾಗಿದ್ದು, ಇದನ್ನು ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸದಸ್ಯ ಅಮಿನ್ ಮೊಹಿಸಿನ್, ಬೀದಿ ನಾಯಿಗಳಿಗಾಗಿಯೇ ಪ್ರತ್ಯೇಕ ಜಾಗವನ್ನು ಗುರುತಿಸಿ ಅಲ್ಲಿ ಅವುಗಳನ್ನು ಬಿಡಬೇಕೆಂದು ಸಲಹೆ ನೀಡಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಮಿತಿ ಮೀರಿರುವ ಮಂಗಗಳ ಕಾಟ, ಕಾಡು ಹಂದಿಗಳ ಉಪಟಳದ ಬಗ್ಗೆಯೂ ಸದಸ್ಯರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಸಭೆಯಲ್ಲಿ ಪೌರಾಯುಕ್ತರಾದ ಹೆಚ್.ಆರ್.ರಮೇಶ್, ಸದಸ್ಯರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.