ನಾಪೋಕ್ಲು ಅ.26 NEWS DESK : ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೊಡಗಿನ ದಿಯಾ ಭೀಮಯ್ಯ ಒಂದು ಬೆಳ್ಳಿ, ಒಂದು ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ತಮಿಳುನಾಡಿನ ಚೆನ್ನೈನಲ್ಲಿ ನಡೆದ 36ನೇ ಸಬ್ ಜೂನಿಯರ್ ಯೋನೆಕ್ಸ್ ಸನ್ ರೈಸ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದಿಯಾ ಭೀಮಯ್ಯ ಡಬ್ಬಲ್ಸ್ ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾಳೆ. ರಾಜ್ಯದ ಪ್ರಥಮ ಶ್ರೇಯಾಂಕಿತ ಆಟಗಾರ್ತಿಯಾದ ದಿಯಾ 17 ವರ್ಷದೊಳಗಿನ ಸಿಂಗಲ್ಸ್, ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಳು. ಡಬಲ್ಸ್ ನಲ್ಲಿ ತಮಿಳುನಾಡಿನ ಪಿ.ವರ್ನಾ ಅವರೊಂದಿಗೆ ಕೂಡಿ ಆಡಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮಿಶ್ರ ಡಬಲ್ಸ್ ನಲ್ಲಿ ಮೈಸೂರಿನ ಅಮಿತ್ ರಾಜ್ ನಟರಾಜ್ ಜೊತೆ ಕೂಡಿ ಆಡಿ ತೃತೀಯ ಸ್ಥಾನಗಳಿಸಿದ್ದು, ಸಿಂಗಲ್ಸ್‍ನಲ್ಲಿ ಪ್ರಥಮ ಶ್ರೇಯಾಂಕಿತ ಮತ್ತು ಚಾಂಪಿಯನ್ ಆಗಿ ಹೊರ ಹೊಮ್ಮಿದ ದಿಯಾ ಒಡಿಸ್ಸಾದ ತಾನ್ವಿ ಪತ್ರಿ ಅವರಿಂದ ಕ್ವಾಟರ್ ಫೈನಲ್ ನಲ್ಲಿ ಪರಾಭವ ಹೊಂದಿದರು. ದಿಯಾ ಮಡಿಕೇರಿಯ ದೇಚೂರಿನ ಬೊಪ್ಪಂಡ ಕುಸುಮ ಹಾಗೂ ಭೀಮಯ್ಯ ಅವರ ಪುತ್ರಿ. ಮೈಸೂರಿನ ವಿದ್ಯಾಶ್ರಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮೈಸೂರಿನ ಸ್ಪೋಟ್ರ್ಸ್ ಪಾರ್ಕ್ ನ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಬೊಪ್ಪಂಡ ಭೀಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ.
ವರದಿ : ದುಗ್ಗಳ ಸದಾನಂದ.