ಮಡಿಕೇರಿ NEWS DESK ಅ.26 : ಲೇಖಕರಿಗೆ ತಾಳ್ಮೆ ಮುಖ್ಯ, ಓದುಗರ ಮನಸ್ಸನ್ನು ಗ್ರಹಿಸುವ ಶಕ್ತಿ ಇರಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಕೊಡವ ಮಕ್ಕಡ ಕೂಟದ 99ನೇ ಪುಸ್ತಕ, ಲೇಖಕಿ ತೆನ್ನೀರ ಟೀನಾ ಚಂಗಪ್ಪ ರಚಿಸಿರುವ “ಮಣ್ಣ್ರ ಋಣ” ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಯಾರೂ ಮರೆಯಬಾರದು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ನಾವು ಅನುಸರಿಸುವ ಸಂಸ್ಕೃತಿ, ಆಚಾರ, ವಿಚಾರ, ಭಾಷೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಲೇಖಕರಿಗೆ ಸಾಮಾಜಿಕ ಬದ್ಧತೆ ಇರಬೇಕು. ಬರಹಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವಂತಿರಬೇಕು ಎಂದರು. “ಮಣ್ಣ್ರ ಋಣ” ಕೃತಿಯು ಸಮಾಜಕ್ಕೆ ಬೇಕಾದ ಉತ್ತಮ ಸಂದೇಶವನ್ನು ಒಳಗೊಂಡಿದೆ. ತಾಯಿ ಮತ್ತು ತಾಯಿ ನಾಡು ಸ್ವರ್ಗಕ್ಕಿಂತ ಹೆಚ್ಚು, ನಾಡು ಬಿಟ್ಟು ಹೋದರೆ ಹೇಗೆಲ್ಲ ಕಷ್ಟಪಡಬೇಕು ಮತ್ತು ಅವಿಭಕ್ತ ಕುಟುಂಬ ಹೇಗೆ ವಿಭಕ್ತ ಕುಟುಂಬವಾಗುತ್ತದೆ ಎಂಬುದರ ಬಗ್ಗೆ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಉತ್ತಮವಾಗಿ ವಿವರಿಸಿದ್ದಾರೆ. ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ಭಾಷೆಗೆ ಸಂಬAಧಿಸಿದ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಬೇಕು ಎಂದು ಡಾ.ಬಿ.ರಾಘವ ಹೇಳಿದರು. “ಮಣ್ಣ್ರ ಋಣ” ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ಡಾ.ಬೊಜ್ಜಂಗಡ ಅವನಿಜ ಸೋಮಯ್ಯ, ಪ್ರಸ್ತುತ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಯುವ ಜನತೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಸಾಹಿತ್ಯಾಸಕ್ತಿ ಬೆಳೆಸುವುದು ಅವಶ್ಯವಾಗಿದ್ದು, ಶಿಕ್ಷಕರು ಉತ್ತಮ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕಿದೆ ಎಂದರು. ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಹೆಚ್ಚು ಹೆಚ್ಚು ಪುಸ್ತಕ ಓದುವ ಅವಕಾಶವನ್ನು ನೀಡಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಹೊರ ಬರುತ್ತಾರೆ. ಪುಸ್ತಕವನ್ನು ಓದುವುದರಿಂದ ಭಾಷೆಯ ಮೇಲಿನ ಹಿಡಿತ ಸಾಧಿಸಬಹುದು ಮತ್ತು ಬರವಣಿಗೆಯ ಜ್ಞಾನವನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಮೊಬೈಲ್‌ನಲ್ಲಿ ಕ್ಷಣಮಾತ್ರದಲ್ಲಿ ಲಭ್ಯವಾಗುವ ಮಾಹಿತಿಯಿಂದಾಗಿ ವಿದ್ಯಾರ್ಥಿಗಳಲ್ಲಿ ಚಿಂತನಾಶಕ್ತಿ, ಕ್ರೀಯಾಶಿಲತೆ ಕಡಿಮೆಯಾಗುತ್ತಿದೆ. ಮಕ್ಕಳು ಕುಟುಂಬದ ಸದಸ್ಯರೊಂದಿಗೆ ಬೆರೆಯಬೇಕು ಮತ್ತು ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಹೆಚ್ಚು ಜ್ಞಾನ ಲಭ್ಯವಾಗಲಿದೆ ಎಂದು ಸಲಹೆ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ತೆನ್ನೀರ ಡಾಟಿ ಗಣೇಶ್ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಪೋಷಕರು ಮಕ್ಕಳಿಗೆ ಪುಸ್ತಕ ಓದಲು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಯಶಸ್ಸಿನ ಜೊತೆಗೆ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ತಮ್ಮ ಕೊಡುಗೆಯನ್ನು ನೀಡಬೇಕು. ಇದರಿಂದ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. “ಮಣ್ಣ್ರ ಋಣ” ಪುಸ್ತಕದ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಮಾತನಾಡಿ, ಪುಸ್ತಕಗಳು ಪ್ರಕಟಗೊಳ್ಳಬೇಕಾದರೆ ದಾನಿಗಳ ಸಹಕಾರದ ಅಗತ್ಯವಿದೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೊಡಗೆ ನೀಡುವಂತಾಗಬೇಕು ಎಂದು ಕರೆ ನೀಡಿದರು. ಕೊಡವ ಸಾಹಿತ್ಯ ಭಂಡಾರಕ್ಕೆ ಇದು ನನ್ನ ಎರಡನೇ ಪುಸ್ತಕವಾಗಿದ್ದು, ನಾನು ಕೇಳಿದ ಮತ್ತು ನೋಡಿದ ಅಭಿಪ್ರಾಯ, ಅನುಭವ, ಕಷ್ಟ-ಸುಖಗಳನ್ನು ಆಧಾರವಾಗಿಟ್ಟುಕೊಂಡು ಕಥೆಯ ರೂಪವನ್ನು ನೀಡಿರುವುದಾಗಿ ತಿಳಿಸಿದರು. ಕೊಡವ ಮಕ್ಕಡ ಕೂಟ ನನ್ನ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಲು ಸಹಕರಿಸಿದ್ದು, ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳು ಹೊರಬರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೂಟದ ಮೂಲಕ ಕೊಡವ ಸಂಸ್ಕೃತಿಯ ಬಗ್ಗೆ ಯುವಜನತೆಯಲ್ಲಿ ನಿರಂತರವಾಗಿ ಜಾಗೃತಿ ಹಾಗೂ ಆಸಕ್ತಿಯನ್ನು ಮೂಡಿಸುತ್ತಾ ಬರಲಾಗುತ್ತಿದೆ. ಮಕ್ಕಳು ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ ಎನ್ನುವ ಹಿರಿಯರ ಟೀಕೆಯನ್ನು ದೂರ ಮಾಡಿ ಹಿರಿಯರೇ ಅಚ್ಚರಿ ಪಡುವಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಕೊಡವ ಮಕ್ಕಡ ಕೂಟ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ, ಪುಸ್ತಕಗಳನ್ನು ಪ್ರಕಟಿಸಿ ಉತ್ತೇಜನ ನೀಡಿದೆ. ಹಿರಿಯರ ಸ್ಮರಣೆ, ಜನ್ಮ ದಿನ ಆಚರಣೆ, ಪ್ರತಿಮೆಗಳ ಅನಾವರಣ ಸೇರಿದಂತೆ ಹಿರಿದಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಶಂಸೆಗೆ ಪಾತ್ರವಾಗಿದೆ. ಮಡಿಕೇರಿಯ ಹಲವು ರಸ್ತೆಗಳಿಗೆ ಕೊಂಗಂಡ ಗಣಪತಿ, ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಕೊರವಂಡ ನಂಜಪ್ಪ, ಪಂದ್ಯಂಡ ಬೆಳ್ಯಪ್ಪ ಅವರ ಹೆಸರುಗಳನ್ನು ಮರು ನಾಮಕರಣ ಮಾಡಲಾಗಿದೆ. ಕೊಡವ ಸಾಧಕ ಯುವಕ-ಯುವತಿಯರನ್ನು ಸೇರಿದಂತೆ ಹಲವರನ್ನು ಸನ್ಮಾನಿಸಿ, ಗೌರವಿಸಿದೆ ಎಂದು ಹೇಳಿದರು. ಕೊಡವ ಮಕ್ಕಡ ಕೂಟದ ನಿರಂತರ ಪ್ರಯತ್ನದಿಂದ ಮಡಿಕೇರಿಯ “ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ” ವೃತ್ತದಲ್ಲಿ ಅಜ್ಜಮಾಡ ಕುಟುಂಬಸ್ಥರ ಸಹಕಾರದಿಂದ “ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ” ಅವರ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ವೀರ ಯೋಧನ ನೆನಪನ್ನು ಚಿರಾಯುವಾಗಿಸಿರುವ ಹೆಗ್ಗಳಿಕೆ ಕೊಡವ ಮಕ್ಕಡ ಕೂಟಕ್ಕಿದೆ. ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ, ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಇಲ್ಲಿಯವರೆಗೆ 99 ಪುಸ್ತಕವನ್ನು ಲೋಕಾರ್ಪಣೆಗೊಳಿಸಿದೆ. ನವೆಂಬರ್ 24 ರಂದು ದಾಖಲೆಯ 100ನೇ ಪುಸ್ತಕ ಪುತ್ತರಿರ ಕರುಣ್ ಕಾಳಯ್ಯ ಅವರ ಸಂಪಾದಕತ್ವದ “ನೂರನೆ ಮೊಟ್ಟ್” ಸೇರಿದಂತೆ ಲೇಖಕರಾದ ಐಚಂಡ ರಶ್ನಿ ಮೇದಪ್ಪ, ಕರವಂಡ ಸೀಮಾ ಗಣಪತಿ, ತೆನ್ನೀರ ಟೀನಾ ಚಂಗಪ್ಪ, ಯಶೋಧ ಪೇರಿಯಂಡ ಅವರು ರಚಿಸಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಹೇಳಿದರು. ಬೊಟ್ಟೊಳಂಡ ನಿವ್ಯ ದೇವಯ್ಯ ಪ್ರಾರ್ಥಿಸಿ, ಐಚಂಡ ರಶ್ಮಿ ಮೇದಪ್ಪ ನಿರೂಪಿಸಿ, ಉಡುವೆರ ರೇಖಾ ರಘು ಸ್ವಾಗತಿಸಿದರು, ಕುಳುವಂಡ ಶೃತಿ ಪೂಣಚ್ಚ ವಂದಿಸಿದರು. ಪೆಬ್ಬಟ್ಟಿರ ಶೀತಲ್ ಕಾರ್ಯಪ್ಪ ಅವರು ಲೇಖಕಿ ಟೀನಾ ಚಂಗಪ್ಪ ಅವರನ್ನು ಪರಿಚಯಿಸಿದರು, ಪೇರಿಯಂಡ ಯಶೋಧ ಪುಸ್ತಕ ಪರಿಚಯ ಮಾಡಿದರು.
Breaking News
- *ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ*
- *ನ.23 ರಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಬಹುಮಾನ ದಿನ*
- *ಬ್ರೆಜಿಲ್ನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ*
- *ಸೋಮವಾರಪೇಟೆ : ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಅಂಗಾರಕ ಸಂಕಷ್ಟಿ ಪೂಜೆ*
- *ಕರಿಕೆಯಲ್ಲಿ ಇನ್ನೂ ಸೆರೆಯಾಗದ ಚಿರತೆ : ಮತ್ತೆ ಸಾಕುನಾಯಿ ಮೇಲೆ ದಾಳಿ : ಬೋನ್ ಅಳವಡಿಸುವ ಭರವಸೆ*
- *ಸೋಮವಾರಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ*
- *ವಿರಾಪೇಟೆ : ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನ ಆಚರಣೆ*
- *ವಿರಾಜಪೇಟೆ : ನ.21 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ನ.21 ರಂದು ಮಡಿಕೇರಿಯ ವಿದ್ಯುತ್ ವ್ಯತ್ಯಯ*
- *ಕೊಡಗು : ಡಿ.13 ರಂದು ರಾಷ್ಟ್ರೀಯ ಲೋಕ ಅದಾಲತ್*