ಸುಂಟಿಕೊಪ್ಪ ನ.4 NEWS DESK : ಐಗೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಐಗೂರು ಕಸಾಪ ಘಟಕದ ಅಧ್ಯಕ್ಷ ಸಂಗಾರು ಕೀರ್ತಿ ಪ್ರಸಾದ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭ ಮಾತನಾಡಿದ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಅಜಿತ್‍ಕುಮಾರ್, ಕರ್ನಾಟಕದ ಜಲ, ನೆಲ, ಸಂಸ್ಕೃತಿ ಸಂಪ್ರಾದಾಯವನ್ನು ಉಳಿಸಿ ಬೆಳೆಸುವುದು ಕರ್ನಾಟಕದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐಗೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಟಿ.ಎಸ್.ಪೂರ್ಣಕುಮಾರ್, ಕನ್ನಡ ಭಾಷೆಗೆ ತನ್ನದೆಯಾದ ವಿಶಿಷ್ಠ ಸಂಸ್ಕೃತಿ, ಪರಂಪರೆ, ಆಚಾರ ವಿಚಾರವಿದೆ. ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಲು ಕನ್ನಡಾಭಿಮಾನಿಗಳು ಕೈಜೋಡಿಸಬೇಕೆಂದು ಕರೆ ನೀಡಿದರು. ಸೋಮವಾರಪೇಟೆ ತಾಲ್ಲೂಕು ಕಸಾಪ ಸದಸ್ಯ ಶಾಫಿ ಸದಿ ಮಾತನಾಡಿ, ಪ್ರಪಂಚದಲ್ಲೇ ವೈವಿಧ್ಯತೆಯಿಂದ ಕೂಡಿದ ಭಾಷೆ, ಸಂಸ್ಕೃತಿ ಕನ್ನಡದಾಗಿದೆ. ಹೃದಯ ವಿಶಾಲತೆ ಹೊಂದಿದ ಕನ್ನಡಿಗರು ದೇಶದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಹೇಳಿದರು. ಕಾಜೂರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ಭಾಷೆಯ ನೃತ್ಯ, ಭಾಷಣ, ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಸೋಮವಾರಪೇಟೆ ಕಸಾಪ ಹೋಬಳಿ ಘಟಕದ ಐಗೂರು ಕೇಂದ್ರದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಗೂರು ಹೋಬಳಿ ಕಸಾಪ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ರಾಜ್ ಅರಸು, ಕೋಶಾಧಿಕಾರಿ ಬೆಳ್ಯಪ್ಪ, ಮಾಚ್ಚಂಡ ಅಶೋಕ, ಹೇಮಂತ್, ಸೋಮವಾರಪೇಟೆ ತಾಲ್ಲೂಕು ಕಸಾಪ ಖಜಾಂಚಿ ಕೆ.ಪಿ.ದಿನೇಶ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ, ಗೌರವ ಕಾರ್ಯದರ್ಶಿ ಕಾಜೂರು ಶಾಲೆ ಮುಖ್ಯೋಪಾದ್ಯಾಯನಿ ಸರಳಾಕುಮಾರಿ ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಅನೂಸೂಯ ನಿರೂಪಿಸಿದರು. ಸರಳಕುಮಾರಿ ವಂದಿಸಿದರು.