ಮಡಿಕೇರಿ ನ.6 NEWS DESK : ಬಹುಮತ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿದ ಪ್ರತಿಭಟನಾಕಾರರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದರು. ದಲಿತರು, ಹಿಂದುಳಿದ ವರ್ಗ, ಕಡು ಬಡವರು, ದುರ್ಬಲರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸುತ್ತಿರುವ ಸಿದ್ದರಾಮಯ್ಯ ಅವರ ದಕ್ಷ ಆಡಳಿತವನ್ನು ಸಹಿಸದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಬೇಕೆನ್ನುವ ಏಕೈಕ ಉದ್ದೇಶದಿಂದ ಆಧಾರ ರಹಿತ ಹಗರಣಗಳನ್ನು ಬೀದಿಗೆ ತರುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಜನರ ಹಾದಿ ತಪ್ಪಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಸಮಿತಿಯ ಪ್ರಮುಖರು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕುರಿತು ವಿರೋಧ ಪಕ್ಷಗಳು ಹಗಲುಗನಸು ಕಾಣುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎನ್.ರಾಜಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್.ಆರ್.ದೇವರಾಜ್, ಎಸ್.ಜೆ.ರಾಜಪ್ಪ, ಪ್ರಮುಖರಾದ ಶಿವಕುಮಾರ್, ದಯಾಕರ, ವೀರಭದ್ರ, ಗಿರೀಶ್, ಚಂದ್ರಶೇಖರ್, ರಂಗಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.