ವಿರಾಜಪೇಟೆ ನ.7 NEWS DESK : ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಎನ್.ಎಸ್.ಎಸ್ ಘಟಕವನ್ನು ಉದ್ಘಾಟಿಸಿ ಅವರು, ಮಾತನಾಡಿದರು. ಕನ್ನಡ ನಾಡು, ನುಡಿ, ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ. ಕನ್ನಡದ ಮೇಲಿನ ಅಭಿಮಾನ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುವಂತದ್ದಲ್ಲ ಕನ್ನಡ ನಮ್ಮ ಉಸಿರಾಗಬೇಕು. ಕನ್ನಡವೆನ್ನುವಂಥದ್ದು ಹಲವು ಭಾಷೆಗಳೊಂದಿಗೆ ಒಡಮೂಡಿ ಬಂದಂತಹ ಸುಂದರ ಭಾಷೆಯಾಗಿದೆ. ಜಗತ್ತಿನಲ್ಲಿ ಮಾತನಾಡಿದಂತೆ ಬರೆಯುವ, ಬರೆದಂತೆ ಓದುವ , ಓದಿದಂತೆ ಮಾತನಾಡುವ ಭಾಷೆ ಎಂದರೆ ಕನ್ನಡ ಮಾತ್ರ. ಪ್ರಸ್ತುತ ಸಮಾಜವನ್ನು ತೆಗೆದುಕೊಂಡಾಗ ಇತರೆ ಪ್ರಾದೇಶಿಕ ಭಾಷೆಗಳು ಹಾಗೂ ಹೊರ ರಾಜ್ಯದ ಭಾಷೆಗಳಿಂದಾಗಿ ಕನ್ನಡ ತುಳಿತಕ್ಕೆ ಒಳಗಾಗುತ್ತಿದೆ. ಇದು ಸರಿಯಲ್ಲ ಎಂಟು ಜ್ಞಾನಪೀಠ ಪ್ರಶಸ್ತಿ, ಒಂದು ಸರಸ್ವತಿ ಸಮ್ಮಾನ್, ಮೂರು ರಾಷ್ಟ್ರಕವಿಗಳನ್ನು ಹೊಂದಿದ ಶ್ರೀಮಂತ ಭಾಷೆ ನಮ್ಮದೆಂಬ ಹೆಗ್ಗಳಿಕೆ ನಮ್ಮಲ್ಲಿರಬೇಕು. ಕನ್ನಡಿಗನ ಕಿಚ್ಚು ಸ್ವಾಭಿಮಾನಕ್ಕೆ ಇತಿಹಾಸವನ್ನು ನೋಡಿದಾಗ ಚಾಲುಕ್ಯರ ಕರ್ನಾಟ ಸೇನೆ, ಇಮ್ಮಡಿ ಪುಲಕೇಶಿಯಂತಹ ಶ್ರೇಷ್ಠ ಅರಸರು ಇದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ. ಕ್ರಿಸ್ತ ಪೂರ್ವದಲ್ಲಿ ರಚನೆಯಾದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ದೊರೆತಂತಹ ಇಸಿಲ ಎಂಬ ಪದ, ಕ್ರಿಸ್ತ ಶಕ 450 ರಲ್ಲಿ ರಚನೆಯಾದ ಹಲ್ಮಿಡಿ ಶಾಸನ, ಹತ್ತನೇ ಶತಮಾನದ ತರುವಾಯ ಪಂಪ, ಪೊನ್ನ, ರನ್ನ, ಜನ್ನ, ಕುಮಾರವ್ಯಾಸ, ನಾಗಚಂದ್ರ ಮುಂತಾದ ಕವಿಗಳಿಂದ ರಚಿತವಾದಂತ ಕೃತಿಗಳು , 12ನೇ ಶತಮಾನಕ್ಕೆ ಸಂದರ್ಭದಲ್ಲಿ ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿದಂತಹ ವಚನ ಸಾಹಿತ್ಯ, ಮಂಟೇಸ್ವಾಮಿ, ಮಲೆಮಾದೇಶ್ವರ ಕಾವ್ಯ, ಜುಂಜಪ್ಪ ಕಾವ್ಯ ನಮ್ಮ ಜಾನಪದ ಮಹಾಕಾವ್ಯಗಳು ಕನ್ನಡದ ಹಿರಿಮೆಯನ್ನು ತಿಳಿಸಿ ಕೊಡುತ್ತವೆ. ಸ್ವತಂತ್ರ ಪೂರ್ವದಿಂದಲೇ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವ ಕೆಲಸಗಳು ನಡೆಯುತ್ತಾ ಬಂದು ಸ್ವತಂತ್ರದ ತರುವಾಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಮೂಲಕ ಕನ್ನಡ ಭಾಷೆ ಹೆಚ್ಚು ಅಭಿವೃದ್ಧಿಯನ್ನು ಕಾಣುತ್ತಾ ಹೋಯಿತು. ಹತ್ತನೇ ಶತಮಾನದಿಂದ ಇಂದಿನವರೆಗೆ ವಿವಿಧ ಸಾಹಿತ್ಯ ಪ್ರಕಾರಗಳ ಮೂಲಕ ಸಾಹಿತ್ಯ ಬೆಳೆದು ಬಂದ ಜಗತ್ತಿನ ಶ್ರೇಷ್ಠ ಭಾಷೆ ಕನ್ನಡ ಎಂಬ ಹೆಮ್ಮೆ ನಮ್ಮೆಲ್ಲರಲ್ಲಿ ಇರಬೇಕೆಂದರು. ರಾಷ್ಟ್ರೀಯ ಸೇವಾ ಘಟಕ ಯೋಜನೆಯ ಉದ್ದೇಶಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಎಂಬುದು ಸಮಾಜದಲ್ಲಿ ನಮ್ಮ ಪಾತ್ರವೇನು. ವ್ಯಕ್ತಿಯಲ್ಲಿ ಇರಬೇಕಾದಂತಹ ಸೇವಾ ಮನೋಭಾವ ಹಾಗೂ ಭವಿಷ್ಯದ ಉತ್ತಮ ಸಮಾಜದ ನಿರ್ಮಾಣದ ಪರಿಕಲ್ಪನೆಯನ್ನು ನಮ್ಮಲ್ಲಿ ತುಂಬುವಂತಹ ಜಾಗೃತಿಯೊಂದಿಗೆ ಸಮಾಜಕ್ಕೆ ಯುವ ಸಮೂಹ ಏನು ಕೊಡುಗೆಯನ್ನು ಕೊಡಬೇಕು ಎಂಬ ಧನಾತ್ಮಕ ಜೀವನ ಶೈಲಿಯೊಂದಿಗೆ ಭವಿಷ್ಯದೊಳಗೆ ಹೇಗೆ ಸಾಗಬೇಕು ಎಂಬುದನ್ನು ತಿಳಿಸುತ್ತಾ ಕಮಿಟ್ ಮೆಂಟ್, ಕರೇಜ್, ಕಂಟ್ರಿಬ್ಯೂಷನ್ ಬೆಳೆಸುವಂತಹ ಶಕ್ತಿ ಎನ್ಎಸ್ಎಸ್ ನಮಗೆ ನೀಡುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್.ಸಲ್ಡಾನ ಮಾತನಾಡಿ, ನಾವೆಲ್ಲ ಕನ್ನಡಿಗರು ಎಂಬ ಹೆಮ್ಮೆ ನಮ್ಮಲ್ಲಿ ಇರಬೇಕು. ನಾವಾಡುವ ಭಾಷೆ ಜಗತ್ತಿನ ಶ್ರೇಷ್ಠ ಭಾಷೆ. ಜಗತ್ತಿನ ಎಲ್ಲಿಯೂ ಕಾಣಿಸಿದಂತಹ ಚಂಪು, ವಚನ, ಕೀರ್ತನೆ, ರಗಳೆಯಂತಹ ಸಾಹಿತ್ಯ ಪ್ರಕಾರಗಳನ್ನು ಒಳಗೊಂಡ ಭಾಷೆ. ಆದರೆ ಇಂದು ರಕ್ಷಣ ವೇದಿಕೆಗಳ ಮೂಲಕ ಭಾಷೆಯನ್ನು ಉಳಿಸುವಂತಹ ಕಾರ್ಯ ನಡೆಯುತ್ತಿದೆ. ಇದು ನಿಜವಾಗಿ ಕನ್ನಡಿಗರು ತಲೆ ತಗ್ಗಿಸುವ ವಿಚಾರ. ಕನ್ನಡವನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಕನ್ನಡ ಅಕ್ಷರಗಳ ಸೌಂದರ್ಯ ರಚನೆಯಾದ ರೀತಿ ನಿಜಕ್ಕೂ ಅದ್ಭುತವಾದದ್ದು. ಕನ್ನಡ ಹಲವು ಶತಮಾನಗಳಿಂದ ಸಮೃದ್ಧವಾಗಿ ಬೆಳೆದು ಬಂದಿದೆ. ಸದಾ ಕನ್ನಡವನ್ನು ಬಳಸಿ ಬೆಳೆಸುವ ಕಾರ್ಯವನ್ನು ನಾವೆಲ್ಲರು ಒಗ್ಗೂಡಿ ಮಾಡೋಣ ಎಂದರು. ನಂತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ಈ ಸಂದರ್ಭದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ವೀಣಾ, ಐಕ್ಯೂಎಸಿ ಸಂಚಾಲಕಿ ಪ್ರಿಯ, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಸಂಚಾಲಕ ನಾಗರಾಜು , ಕನ್ನಡ ವಿಭಾಗದ ಮುಖ್ಯಸ್ಥರಾದ ಸುನಿಲ್ ಕುಮಾರ್, ಕಾಲೇಜಿನ ಉಪನ್ಯಾಸಕ ವರ್ಗ ಆಡಳಿತ ಸಿಬ್ಬಂದಿಗಳು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.