ವಿರಾಜಪೇಟೆ ನ.7 NEWS DESK : ಕ್ರೀಡೆಯಲ್ಲಿ ಶಿಸ್ತು ಹಾಗೂ ಏಕತೆ ಮುಖ್ಯವಾಗಿದೆ ಎಂದು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಅಭಿಪ್ರಾಯಪಟ್ಟರು. ವಿರಾಜಪೇಟೆ ಪಟ್ಟಣದ ಸೈಂಟ್ ಆನ್ಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಐಕ್ಯೂಎಸಿ ಮತ್ತು ಬಿಬಿಎ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಉತ್ತಮವಾದ ಅವಕಾಶಗಳಿದ್ದು, ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪೋಷಕರನ್ನು ಗೌರವಿಸಬೇಕು ಎಂದರು. ಮಾತ್ರವಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಉತ್ತಮವಾಗಿ ವರ್ತಿಸುದರ ಜೊತೆಗೆ ಮಾದರಿ ಸಮಾಜವನ್ನು ನಿರ್ಮಿಸಿ ಎಂದು ಕರೆ ನೀಡಿದರು. ಆಟಗಾರರು ಶಿಸ್ತು ಬದ್ದವಾದ ಆಟವನ್ನು ಪ್ರದರ್ಶಿಸುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸೈಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಮಾತನಾಡಿ, ಕ್ರೀಡೆಗಳನ್ನು ಆಯೋಜಿಸುವುದರಿಂದ ಏಕತೆಯ ಜೊತೆಗೆ ಪರಸ್ಪರ ಬಾಂಧವ್ಯ ವೃದ್ಧಿಯಾಗುತ್ತದೆ. ಸಮಾಜದ, ರಾಷ್ಟ್ರದ ಅಭಿವೃದ್ಧಿಗೂ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ನಮ್ಮ ಕಾಲೇಜಿನ ವತಿಯಿಂದ ಸತತ ಎರಡನೇ ಬಾರಿಗೆ ರಾಷ್ಟ್ರ ಮಟ್ಟದ ಕ್ರೀಡೆಯನ್ನು ಆಯೋಜಿಸುತ್ತಿದ್ದು, ಇದಕ್ಕೆ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಎಲ್ಲಾ ವಿದ್ಯಾರ್ಥಿಗಳ ಸಹಕಾರ ಮುಖ್ಯವಾಗಿದೆ ಎಂದರು. ಏಕಾಗ್ರತೆ, ದೃಢ ನಿರ್ಧಾರ, ಯೋಜನೆ ಹಾಗೂ ಕ್ರಿಯಾಶೀಲತೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದ ಅವರು, ವಿದ್ಯಾರ್ಥಿಗಳ ತಂಡ ಕಾರ್ಯವನ್ನು ಪ್ರಶಂಸಿಸಿದರು. ಈ ಸಂದರ್ಭ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ದೈಹಿಕ ಶಿಕ್ಷಕರಾದ ರಾಜ ರೈ, ಕ್ರೀಡಾ ನಾಯಕರಾದ ಕಾವೇರಪ್ಪ, ರಹೀಮ್ ಹಾಜರಿದ್ದರು. ಉಪನ್ಯಾಸಕಿ ಹೇಮ ಸ್ವಾಗತಿಸಿದರು. ವಿಲೀನ ಗೋನ್ಸಾಲ್ವೇಸ್ ನಿರೂಪಿಸಿದರು. ಉಪನ್ಯಾಸಕಿ ಪೂಜಾ ವಂದಿಸಿದರು. ನ.8 ರಂದು ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಕಾಲೇಜುಗಳ 28 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ.