ಮಡಿಕೇರಿ ನ.9 NEWS DESK : ಕಂಡಂಗಾಲ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಸಮಿತಿ ವತಿಯಿಂದ ಡಿ.19 ರಿಂದ 25ರವರೆಗೆ ಶಾಲಾ ಮೈದಾನದಲ್ಲಿ ಮೂರು ನಾಡಿಗೆ ಸೀಮಿತವಾಗಿ ಐನ್ ಮನೆ ಇರುವ ಕೊಡವ ಕುಟುಂಬಗಳ ನಡುವೆ ಹಾಕಿ ಮತ್ತು ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಮುಲ್ಲೇಂಗಡ ಸುರೇಶ್ ತಿಮ್ಮಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬೊಟ್ಟತ್‍ನಾಡ್, ಕುತ್ತ್‍ನಾಡ್ ಮತ್ತು ಬೇರಳಿನಾಡ್‍ಗೆ ಸಂಬಂಧಿಸಿದ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ಹಾಗೂ ಬಿಟ್ಟಂಗಾಲ ಹಾತೂರು ಮತ್ತು ಪೊನ್ನಂಪೇಟೆ ಗ್ರಾಮ ಪಂಚಾಯ್ತಿಯ ಭಾಗಶಃ ಭಾಗಗಳಲ್ಲಿನ ಕೊಡವ ಐನ್ ಮನೆಗಳನ್ನು ಹೊಂದಿದ ಕೊಡವ ಕುಟುಂಬಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದು ಎಂದರು. ಕಳೆದ ಸಾಲಿನ ಹಾಕಿ ಪಂದ್ಯಾವಳಿಯಲ್ಲಿ 21 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ 30 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರತಿ ತಂಡದಲ್ಲಿ ಕೊಡವೇತರ ಯಾವುದೇ ಸಮುದಾಯಕ್ಕೆ ಸೇರಿದ ಐವರು ಅತಿಥಿ ಆಟಗಾರರನ್ನು ಆಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಕಳೆದ ಸಾಲಿನ ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅತಿಥಿ ಆಟಗಾರರು ಭಾಗವಹಿಸಿದ್ದರು, ಈ ಬಾರಿಯೂ ಉತ್ತಮ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಗಳಿದೆಯೆಂದು ತಿಳಿಸಿದರು. ಹಾಕಿ ಪಂದ್ಯಾವಳಿಯಲ್ಲಿ ವಿಶೇಷವಾಗಿ ಕಂಡಂಗಾಲ ಗ್ರಾಮದ ಮಂದಮಾಡ ಕೊಡವ ಮುಸ್ಲಿಂ ಸಮುದಾಯದ ತಂಡವು ಪಾಲ್ಗೊಳ್ಳುವುದು ವಿಶೇಷವೆಂದು ಹೇಳಿದರು.
ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾವಳಿ :: ಕ್ರೀಡಾ ಸಮಿತಿ ಅಧ್ಯಕ್ಷ ಬಲ್ಲಡಿಚಂಡ ರವಿ ಸೋಮಯ್ಯ ಮಾತನಾಡಿ, ಮೂರು ನಾಡಿನ ಐನ್ ಮನೆಗಳಿರುವ ಕೊಡವ ಕುಟುಂಬಗಳ ಮಹಿಳೆಯರಿಗೆ ‘ಹಗ್ಗ ಜಗ್ಗಾಟ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಮೂರ್‍ನಾಡಿಗೆ ಸೇರಿದ, ವಿವಾಹವಾಗಿ ಹೋದ ಮಹಿಳೆಯರು ತಮ್ಮ ತವರು ಮನೆಯ ತಂಡದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ. ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ 2 ಸಾವಿರ ಪ್ರವೇಶ ಶುಲ್ಕ ಮತ್ತು ಹಗ್ಗಜಗ್ಗಾಟದಲ್ಲಿ ಪಾಲ್ಗೊಳ್ಳುವ ತಂಡಗಳಿಗೆ 1 ಸಾವಿರ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದ್ದು, ಡಿ.10 ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಬಹುಮಾನ :: ಹಾಕಿ ಪಂದ್ಯಾವಳಿ ವಿಜೇತ ತಂಡಕ್ಕೆ 50 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 30 ಸಾವಿರ ನಗದು ಮತ್ತು ಟ್ರೋಫಿ, ತೃತೀಯ 20 ಸಾವಿರ ನಗದು ಮತ್ತು ಟ್ರೋಫಿ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ 10 ಸಾವಿರ ನಗದು ಬಹುಮಾನವನ್ನು ನೀಡಲಾಗುತ್ತದೆ. ಹಗ್ಗಜಗ್ಗಾಟ ಪಂದ್ಯಾವಳಿ ವಿಜೇತ ತಂಡಕ್ಕೆ 10 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 7 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುತ್ತದೆಂದು ವಿವರಗಳನ್ನಿತ್ತರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ನಿರ್ದೇಶಕ ಮೂಕಚಂಡ ಚುಮ್ಮಿ ದೇವಯ್ಯ ಉಪಸ್ಥಿತರಿದ್ದರು.