ಮಡಿಕೇರಿ ನ.11 NEWS DESK : ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಯ ದೂರದೃಷ್ಟಿಯಿಂದ ಹಿರಿಯರು ಕಟ್ಟಿ ಬೆಳೆಸಿದ ದಕ್ಷಿಣ ಕೊಡಗಿನ ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 100 ಫಲಪ್ರದವಾದ ವರ್ಷಗಳನ್ನು ಪೂರೈಸಿದ್ದು, ಶಾಲೆಯ ಶತಮಾನೋತ್ಸವ ಸಮಾರಂಭ ನ.16 ಮತ್ತು 17 ರಂದು ಆಯೋಜಿತವಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾಯಮುಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ಪ್ರಮುಖರು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರೂ ಆಗಿರುವ ಟಾಟು ಮೊಣ್ಣಪ್ಪ ಈ ಬಗ್ಗೆ ಮಾಹಿತಿ ನೀಡಿ, 1924 ರಲ್ಲಿ ಆರಂಭಗೊಂಡ ಶಾಲೆ ಪ್ರಸ್ತುತ ಶತಮಾನೋತ್ಸವ ಸಂಭ್ರಮದಲ್ಲಿದೆ. ಈ ಹಿನ್ನೆಲೆ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು.
ಕ್ರೀಡಾ ಚಟುವಟಿಕೆ :: ಶತಮಾನೋತ್ಸವ ಹಿನ್ನೆಲೆಯಲ್ಲಿ ನ.15 ರಂದೆ ಪೊನ್ನಂಪೇಟೆ ತಾಲ್ಲೂಕು ಮಟ್ಟದ ವಾಲಿಬಾಲ್, ಪುರುಷರು ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಪಂದ್ಯಾವಳಿ ನಡೆಯಲಿದೆಯೆಂದು ತಿಳಿಸಿದರು. ನ.16 ರಂದು ಬೆಳಗ್ಗೆ 10 ಗಂಟೆಗೆ ವಿಧಾನ ಪರಿಷತ್‍ನ ಮಾಜಿ ಸದಸ್ಯರಾದ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಆಟೋಟ ಸ್ಪರ್ಧೆಗಳಿಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಅಂದು ಬೈಕ್ ಮತ್ತು ಸೈಕಲ್ ನಿಧಾನ ಚಾಲನೆ ಸ್ಪರ್ಧೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದಾಗಿ ಮಾಹಿತಿಯನ್ನಿತ್ತರು.
ಸಭಾಂಗಣ ಉದ್ಘಾಟನೆ – ಸನ್ಮಾನ : ಅಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಅವರು ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ವಹಿಲಿದ್ದಾರೆ. ಶತಮಾನೋತ್ಸವ ಪ್ರಯುಕ್ತ ಶಾಲೆಯ ಹಳೆಯ ವಿದ್ಯಾರ್ಥಿಗಳಾದ, ಪ್ರಸ್ತುತ ರಾಜ್ಯದ ಇಂಧನ ಸಚಿವರಾಗಿರುವ ಕೆ.ಜೆ.ಜಾರ್ಜ್ ಒದಗಿಸಿರುವ ಸುಮಾರು 15 ಲಕ್ಷ ರೂ.ನೆರವಿನಿಂದ ನಿರ್ಮಿಸಲಾಗಿರುವ ‘ಶತಮಾನೋತ್ಸವ ಸಭಾಂಗಣ’ವನ್ನು ಸಚಿವರೆ ಉದ್ಘಾಟಿಸಲಿದ್ದಾರೆ ಎಂದರು. ಶಾಲೆ ನಡೆದು ಬಂದ ಹಾದಿಯ ಬಗ್ಗೆ ಹೊರ ತರಲಾಗಿರುವ ‘ಸ್ಮರಣ ಸಂಚಿಕೆ’ಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅನಾವರಣಗೊಳಿಸಲಿದ್ದಾರೆಂದರು.
9 ಮಂದಿ ಗಣ್ಯರಿಗೆ ಸನ್ಮಾನ : ಮಾಯಮುಡಿ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಸಾಧನೆಗಳನ್ನು ಮಾಡಿರುವ 9 ಮಂದಿಯನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಶಾಲಾ ವಿದ್ಯಾರ್ಥಿಗಳಾಗಿದ್ದ ಇಂದಿನ ಇಂಧÀನ ಸಚಿವ ಕೆ.ಜೆ.ಜಾರ್ಜ್, ಮಾಜಿ ಎಂಎಲ್‍ಸಿ ಹಾಗೂ ಅಂತರಾಷ್ಟ್ರೀಯ ಮಟ್ಟದ ಕರಾಟೆಪಟು ಚೆಪ್ಪುಡಿರ ಅರುಣ್ ಮಾಚಯ್ಯ, ಸಿಎಫ್‍ಟಿಆರ್‍ಐ ವಿಜ್ಞಾನಿ ಕಾಳಪಂಡ ಕಾಶಿ ಅಪ್ಪಯ್ಯ, ಫುಟ್ಬಾಲ್ ಮತ್ತು ಹಾಕಿಯಲ್ಲಿ ಉನ್ನತ ಸಾಧನೆ ಮಾಡಿರುವ ಕಳ್ಳಿಚಂಡ ಪ್ರಸಾದ್, ಬಿಎಸ್‍ಎಫ್‍ನಲ್ಲಿ ಡಿಐಜಿಯಾಗಿ ಸೇವೆ ಸಲ್ಲಿಸಿದ್ದ ದಿವಂಗತ ಐಚೆಟ್ಟಿರ ಪೊನ್ನಪ್ಪ ಅವರ ಕುಟುಂಬಸ್ಥರು, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿಶ್ರಾಂತ ಡೀನ್ ಡಾ.ಸಿ.ಜಿ.ಕುಶಾಲಪ್ಪ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಂಜಿತಂಡ ಸ್ವಾತಿ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೊಂಗಂಡ ಗಣಪತಿ ಮತ್ತು ಚೆಪ್ಪುಡಿರ ರಾಧಾ ಅಚ್ಚಯ್ಯ ಅವರು ಸನ್ಮಾನಕ್ಕೆ ಪಾತ್ರರಾಗಲಿದ್ದಾರೆಂದು ವಿವರಗಳನ್ನಿತ್ತರು. ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಕಾಳ¥ಂಡ ಟಿ.ಬಿದ್ದಪ್ಪ ಅವರು ಮಾತನಾಡಿ, ನ.17 ರಂದು ಮಧ್ಯಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.ಶತಮಾನೋತ್ಸವವನ್ನು ಯಶಸ್ವಿಯಾಗಿ ನಡೆಸುವುದಕ್ಕೆ ಗ್ರಾಮಸ್ಥರನ್ನು ಒಳಗೊಂಡಂತೆ ಸರ್ವರ ಸಹಕಾರದೊಂದಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಸಾಂಸ್ಕೃತಿಕ ಸಂಭ್ರಮ : ಶತಮಾನೋತ್ಸವ ಸಮಿತಿಯ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಬಾನಂಡ ಪ್ರಥ್ಯು ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಶತಮಾನೋತ್ಸವ ಸಮಾರಂಭದ ಸಂದರ್ಭ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಳೇ ವಿದ್ಯಾರ್ಥಿ ಸಂಘ, ಗೋಣಿಕೊಪ್ಪಲಿನ ಸ್ಥಕ್ಲೋನ್ ತಂಡ, ಕಾವೇರಿ ಕಾಲೇಜಿನ ಉಮ್ಮತ್ತಾಟ್ ತಂಡ, ಪೊನ್ನಂಪೇಟೆಯ ನಿಸರ್ಗ ತಂಡ, ನಾಟ್ಯ ಸಂಕಲ್ಪ ನೃತ್ಯ ಶಾಲೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನ.17 ರಂದು ರಾತ್ರಿ 8 ಗಂಟೆಗೆ ಕೊಡಿಬೈಲ್ ಚಂದ್ರಶೇಖರ್ ತಂಡದಿಮದ ‘ಶಿವ ಧೂತ ಗುಳಿಗ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆಯೆಂದರು. ಗೋಷ್ಠಿಯಲ್ಲಿ ಶತಮಾನೋತ್ಸವ ಸಮಿತಿ ಖಜಾಂಚಿ ಎಸ್.ಎಸ್.ಸುರೇಶ್ ಉಪಸ್ಥಿತರಿದ್ದರು.