ಮಡಿಕೇರಿ ನ.11 NEWS DESK : ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯವ್ಯಾಪಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ಮೂರ್ನಾಡಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಮೂರ್ನಾಡು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಟೈಲರ್ ಅಸೋಸಿಯೇಷನ್ ಸದಸ್ಯರು, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಕನ್ನಡ ರಥವನ್ನು ಕೊಂಡಂಗೇರಿ ರಸ್ತೆಯಿಂದ ಬಸ್ ನಿಲ್ದಾಣದವರೆಗೆ ಪೂರ್ಣಕುಂಭ ಕಳಸ ಮತ್ತು ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡು ಗೌರವ ಅರ್ಪಿಸಿದರು. ಪಂಚಾಯಿತಿ ಸದಸ್ಯರಾದ ಮುಂಡಂಡ ವಿಜಯಲಕ್ಷ್ಮಿ ಅವರ ನೇತೃತ್ವದಲ್ಲಿ ತಾಯಿ ಭುವನೇಶ್ವರಿಗೆ ಪೂಜೆಯನ್ನು ನೆರವೇರಿಸಲಾಯಿತು. ಮೂರ್ನಾಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್, ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಾಶಿರ್ ಮತ್ತಿತರರು ಭುವನೇಶ್ವರಿಗೆ ಮಾಲಾರ್ಪಣೆ ಮಾಡಿದರು. ನಂತರ ಮೂರ್ನಾಡು ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕನ್ನಡನಾಡು ನುಡಿಯ ಕುರಿತು ನೃತ್ಯ ಪ್ರದರ್ಶಿಸಿದರು. ಪರಿಷತ್ತಿನ ಅಧ್ಯಕ್ಷೆ ಹರಿಣಿ ವಿಜಯ್ ಮಾತನಾಡಿ ಶ್ರೀಮಂತ ಭಾಷೆ ಕನ್ನಡದ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನ ಮೂಡಬೇಕು. ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬೆಳೆಸಬೇಕು, ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಕನ್ನಡದ ಕೀರ್ತಿ ಪತಾಕೆ ಹಾರಾಡುವಂತೆ ಮಾಡಬೇಕು ಎಂದು ಕರೆ ನೀಡಿದರು. ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ನಾಪೋಕ್ಲು ಹೋಬಳಿ ಅಧ್ಯಕ್ಷ ನೆರವಂಡ ಉಮೇಶ್, ಪದಾಧಿಕಾರಿಗಳಾದ ಮುನೀರ್, ಪುಷ್ಪ, ವಿಂದ್ಯ ದೇವಯ್ಯ, ಸದಸ್ಯ ಈರಮಂಡ ವಿಜಯ್ ಉತ್ತಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಖಾ ಬಿ.ಎಸ್, ಸದಸ್ಯರಾದ ಈರ ಸುಬ್ಬಯ್ಯ, ಸುಂದರಿ ಬಿ.ಎಸ್, ರೀಟಾ ಪಿ.ಎಸ್, ಪುಷ್ಪ ಎಂ.ಎಂ, ಮೀನಾಕ್ಷಿ ದೇವಯ್ಯ, ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಮಡಿಕೇರಿಯ ಕಂದಾಯ ಪರಿವೀಕ್ಷಕ ಚಂದ್ರಪ್ರಸಾದ್, ಗ್ರಾಮಾಧಿಕಾರಿ ಅಕ್ಷತಾ ಬಿ.ಶೆಟ್ಟಿ, ಮೂರ್ನಾಡು ಪೊಲೀಸ್ ಉಪಠಾಣೆಯ ಸಹಾಯಕ ಉಪನಿರೀಕ್ಷಕ ಶ್ರೀನಿವಾಸ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ, ಪ್ರೌಢಶಾಲೆಯ ಶಿಕ್ಷಕರಾದ ಲೀನಾ, ಕವಿಯತ್ರಿ ಕೆ.ಜಿ.ರಮ್ಯ, ಯಶೋಧ, ಅಂಗನವಾಡಿ ಶಿಕ್ಷಕರು, ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು. ಮೂರ್ನಾಡು ಹೋಬಳಿ ಕಸಾಪ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ ಸ್ವಾಗತಿಸಿ ವಂದಿಸಿದರು.