ಮಡಿಕೇರಿ ನ.12 NEWS DESK : ವಕ್ಫ್ ಆಸ್ತಿ ಎಂದು ಹೇಳಿಕೊಂಡು ಕುಶಾಲನಗರ ಸಮೀಪದ ಮಹಿಳೆಯೊಬ್ಬರಿಗೆ ಬೆದರಿಕೆ ಒಡ್ಡಿದ್ದಾರೆ ಎನ್ನುವ ಪ್ರಕರಣ ಪೊಲೀಸರ ತನಿಖೆಯಿಂದ ಸುಳ್ಳೆಂದು ಸಾಬೀತಾಗಿದೆ. ಈ ಪ್ರಕರಣದ ಹಿಂದಿರುವ ಪ್ರಭಾವಿಗಳನ್ನು ಕೊಡಗು ಪೊಲೀಸರು ಪತ್ತೆಹಚ್ಚಿ ಸತ್ಯಾಂಶವನ್ನು ಬಯಲಿಗೆಳೆಯಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ವ್ಯಾಪ್ತಿಯ ನಿವಾಸಿ ಆರೋಪದ ಹಿನ್ನೆಲೆ ತನಿಖೆ ನಡೆಸಿದಾಗ ಪ್ರಕರಣದಲ್ಲಿ ಸತ್ಯಾಂಶವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಂತಹ ಸುಳ್ಳುಗಳ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನವನ್ನು ಬಿಜೆಪಿ ಹಾಗೂ ಕೆಲವು ಪ್ರಭಾವಿಗಳು ಮಾಡಿರುವ ಸಾಧ್ಯತೆಗಳಿದೆ ಎಂದು ಆರೋಪಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ನಿಯೋಗ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಪ್ರಕರಣದ ಕುರಿತು ಮನವರಿಕೆ ಮಾಡಿಕೊಡಲಿದೆ ಮತ್ತು ಸಮಗ್ರ ತನಿಖೆಗೆ ಆಗ್ರಹಿಸಲಿದೆ ಎಂದರು. “ವಕ್ಫ್” ಹೆಸರನ್ನು ಬಳಸಿಕೊಂಡು ಬಿಜೆಪಿಯು ಸಮಾಜದ ಕೋಮು ಸಾಮರಸ್ಯವನ್ನು ಹದಗೆಡಿಸುವ ಷಡ್ಯಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ ಮಾಜಿ ಸಂಸದ ಪ್ರತಾಪಸಿಂಹ ಪೊನ್ನಂಪೇಟೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಎರಡು ಅವಧಿಗಳ ಕಾಲ ಸಂಸದರಾಗಿ ಏನನ್ನೂ ಮಾಡದೆ, ಪಕ್ಷದಿಂದಲೇ ಟಿಕೆಟ್ ವಂಚಿತರಾದ ಅವರು ನೀಡುವ ಹೇಳಿಕೆಗಳ ಬಗ್ಗೆ ಜನ ಅರಿತಿದ್ದಾರೆ. ಪ್ರತಾಪ್ ಸಿಂಹ ಅವರು ಮೈಸೂರಿನಲ್ಲೇ ಇರುವುದು ಒಳಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ರಾಜ್ಯಾವ್ಯಾಪಿ ಬಿಜೆಪಿ ವಕ್ಫ್ ಗೊಂದಲವನ್ನು ಹುಟ್ಟು ಹಾಕಿ ರಾಜಕೀಯ ಲಾಭ ಪಡೆಯುವ ಮೂಲಕ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಆದರೆ, ಇದೇ ಬಿಜೆಪಿ 2014 ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿಯ ಸಂರಕ್ಷಣೆಯ ಬಗ್ಗೆ ಭರವಸೆ ನೀಡಿತ್ತು. ಪ್ರಧಾನಿ ನರೇಂದ್ರ್ರ ಮೋದಿಯವರು ಜಾತ್ಯತೀತತೆ ಮತ್ತು ವಕ್ಫ್ ಆಸ್ತಿಯ ಸಂರಕ್ಷಣೆಯ ಬಗ್ಗೆ ಮಾತನಾಡಿದ್ದರು. ಆದರೆ ಇದೀಗ ರಾಜ್ಯ ಬಿಜೆಪಿ ಸಮಾಜದಲ್ಲಿ ಕಿಚ್ಚು ಹಚ್ಚುವ ಪ್ರಯತ್ನಕ್ಕೆ ಮುಂದಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲೆ 414 ರೈತರಿಗೆ ನೋಟಿಸ್ ನೀಡಿತ್ತು ಎಂದು ಟೀಕಿಸಿದರು.
ಪ್ರಸ್ತುತ ವಿವಾದಕ್ಕೆ ಕಾರಣವಾಗಿರುವ ವಕ್ಫ್ ನೋಟಿಸ್‍ಗಳು ಸರ್ಕಾರದ ಮತ್ತು ಸಚಿವರುಗಳ ಗಮನಕ್ಕೆ ಬಾರದೆ ಅಧಿಕಾರಿಗಳಿಂದ ನಡೆದಿದೆ. ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿರುವುದಲ್ಲದೆ, ವಕ್ಫ್ ನೋಟಿಸ್ ಹಿಂಪಡೆಯಲು ಕ್ರಮ ಕೈಗೊಂಡಿರುವುದಾಗಿ ಧರ್ಮಜ ಉತ್ತಪ್ಪ ಸ್ಪಷ್ಟಪಡಿಸಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಹಾಗೂ ವಕ್ತಾರ ತೆನ್ನಿರಾ ಮೈನಾ ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಹಾಗೂ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಉಪಸ್ಥಿತರಿದ್ದರು.