ಮಡಿಕೇರಿ ನ.23 NEWS DESK : ಮಾದರಿ ವಿಶೇಷಚೇತನರ ಸ್ವ ಸಹಾಯ ಸಂಘ ಹಾಗೂ ಮಾದರಿ ಗ್ರಾಮ/ ಪಟ್ಟಣ ಪಂಚಾಯಿತಿಯ ಪ್ರಶಸ್ತಿಗಳ ಮಾರ್ಗಸೂಚಿಗಳು [ಮೈಸೂರು (ನಗರ ಪ್ರದೇಶವನ್ನು ಹೊರತುಪಡಿಸಿ) ಮತ್ತು ಕೊಡಗು ಜಿಲ್ಲೆಗಳಿಗೆ ಮಾತ್ರ ಅನ್ವಯ] ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮುದಾಯದ ಅಭಿವೃದ್ಧಿಗಾಗಿ 1984 ರಿಂದ ಆರೋಗ್ಯ, ಶಿಕ್ಷಣ, ಸಾಮಾಜಿಕ-ಆರ್ಥಿಕ ಸಬಲೀಕರಣ ಕಾರ್ಯಕ್ರಮ ಹಾಗೂ ತರಬೇತಿ ಮತ್ತು ಸಂಶೋಧನೆ ಎಂಬ ನಾಲ್ಕು ಕ್ಷೇತ್ರಗಳಲ್ಲಿ ತನ್ನ ಕಾರ್ಯಕ್ಷಮತೆ ಇರಿಸಿಕೊಂಡು ನವಭಾರತದ ನಿರ್ಮಾಣದೆಡೆಗೆ ಸಾಗುತ್ತಿದೆ. ಸಂಸ್ಥೆಯು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಸರ್ಕಾರ, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಮಾನ ಮನಸ್ಸುಳ್ಳವರು ಸೇರಿ, ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಸ್ಥೆಯು 1990ರ ದಶಕದಿಂದ ವಿಶೇಷಚೇತನರ ಸಬಲೀಕರಣಕ್ಕಾಗಿ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ನಡೆಸುತ್ತಿದ್ದು, ಪ್ರಸ್ತುತ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆ ಕಾರ್ಯಕ್ರಮವು ಜಾರಿಯಲ್ಲಿದೆ. ವಿಶೇಷಚೇತನರನ್ನು ಗುರುತಿಸಿ, ಮೌಲ್ಯಮಾಪನ ಮಾಡಿ, ದೈಹಿಕ ಮತ್ತು ಮಾನಸಿಕ ಹಾಗೂ ಸಂವೇದನಾ ಸಾಮಥ್ರ್ಯ ಹೆಚ್ಚಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯೊಂದಿಗೆ ಸ್ಪರ್ಧಿಸಿ, ಸಾಮಾಜಿಕ-ಆರ್ಥಿಕ ಉತ್ಪಾದಕ ಜೀವನವನ್ನು ನಡೆಸುವಂತೆ ಸಕ್ರಿಯಗೊಳಿಸುವ ಗುರಿ ಹೊಂದಿದೆ. ಸಂಸ್ಥೆಯು ವಿಶೇಷಚೇತನರ ಬಗೆಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ವಿಶೇಷಚೇತನರ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. 2024-25 ನೇ ಸಾಲಿನ ಅಂತರರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆ “ಸೇರ್ಪಡೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಶೇಷಚೇತನರ ನಾಯಕತ್ವ ವರ್ಧಿಸುವುದು” ಎಂಬ ಘೋಷ ವಾಕ್ಯದೊಂದಿಗೆ ಡಿಸೆಂಬರ್ ತಿಂಗಳ ನಾಲ್ಕನೇ ವಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾದರಿ ಸ್ವ-ಸಹಾಯ ಸಂಘ ಹಾಗೂ ಮಾದರಿ ಗ್ರಾಮ/ ಪಟ್ಟಣ ಪಂಚಾಯಿತಿ ಎಂಬ 2 ರೀತಿಯ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗುತ್ತದೆ. ಪ್ರಶಸ್ತಿಯ ಹೆಸರು ಮಾದರಿ ವಿಶೇಷಚೇತನರ ಸ್ವ-ಸಹಾಯ ಸಂಘ(2), ಪ್ರತೀ ಸಂಘಕ್ಕೆ ರೂ.10 ಸಾವಿರ ಮತ್ತು ಪ್ರಮಾಣ ಪತ್ರ. ಮಾದರಿ ಗ್ರಾಮ/ ಪಟ್ಟಣ ಪಂಚಾಯಿತಿ(2) ಗೌರವ ಸಮರ್ಪಣೆ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತಾ ಮಾನದಂಡಗಳು: ಮಾದರಿ ವಿಶೇಷಚೇತನರ ಸ್ವ-ಸಹಾಯ ಸಂಘ: ಮೈಸೂರು (ನಗರ ಪ್ರದೇಶವನ್ನು ಹೊರತುಪಡಿಸಿ) ಮತ್ತು ಕೊಡಗು ಜಿಲ್ಲೆಯ ವಿಶೇಷಚೇತನರ ಸ್ವ-ಸಹಾಯ ಸಂಘಗಳಿಗೆ ಮಾತ್ರ ಅನ್ವಯ, ಸಂಘವು ಕನಿಷ್ಠ ಶೇ.50 ವಿಶೇಷಚೇತನರು ಅಥವಾ ವಿಶೇಷಚೇತನರ ಕುಟುಂಬ ಸದಸ್ಯರನ್ನು ಒಳಗೊಂಡಿರಬೇಕು. ಕನಿಷ್ಟ ಒಂದು ವರ್ಷವನ್ನು ಪೂರ್ಣಗೊಳಿಸಿ, ನಿರಂತರವಾಗಿ ಮುನ್ನಡೆಯುತ್ತಿರಬೇಕು. ಮಾದರಿ ಗ್ರಾಮ/ ಪಟ್ಟಣ ಪಂಚಾಯಿತಿ: ಮೈಸೂರು (ನಗರ ಪ್ರದೇಶವನ್ನು ಹೊರತುಪಡಿಸಿ) ಮತ್ತು ಕೊಡಗು ಜಿಲ್ಲೆಯ ಗ್ರಾಮ/ ಪಟ್ಟಣ ಪಂಚಾಯಿತಿಗಳಿಗೆ ಮಾತ್ರ ಅನ್ವಯ, ವಿಶೇಷಚೇತನರ ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತಿರಬೇಕು. ಮೌಲ್ಯಮಾಪನಾ ಮಾನದಂಡಗಳು: ಮಾದರಿ ವಿಶೇಷಚೇತನರ ಸ್ವ-ಸಹಾಯ ಸಂಘ: ಸಂಘದ ನಿಯಮಗಳ ಪಾಲನೆ ಹಾಗೂ ನಿರಂತರತೆ, ಬ್ಯಾಂಕ್, ಸ್ಥಳೀಯ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದು. ಪಡೆದುಕೊಂಡ ಸಾಲದ ಮರುಪಾವತಿ, ತೆಗೆದುಕೊಂಡ ಸಾಲದ ಸಮರ್ಪಕ ಬಳಕೆ, ಇತರೆ ವಿಶೇಷಚೇತನರ ಶ್ರೇಯೋಭಿವೃದ್ಧಿಯತ್ತ ಗಮನ, ಒಬ್ಬರು ಅಧಿಕಾರಿ ಹಾಗೂ ಒಬ್ಬರು ಸಮುದಾಯದವರಿಂದ ಅಭಿಪ್ರಾಯ ಹಂಚಿಕೆಯ ವಿಡಿಯೋ ರೆಕಾರ್ಡ್ (ಸಂಘದ ಸದಸ್ಯರನ್ನು ಹೊರತುಪಡಿಸಿ ಮಾದರಿ ಗ್ರಾಮ/ ಪಟ್ಟಣ ಪಂಚಾಯಿತಿ: ಶೇ.5 ವಿಶೇಷಚೇತನರ ಅನುದಾನದ ಬಳಕೆ, ಗ್ರಾಮೀಣ/ ನಗರ ಪುನರ್ವಸತಿ ಕಾರ್ಯಕರ್ತರನ್ನು ಹೊಂದಿರುವುದು. ಸಮುದಾಯದಲ್ಲಿ ಜಾಗೃತಿ ಹಾಗೂ ಅರಿವಿನ ಕಾರ್ಯಕ್ರಮಗಳು, ಪುನರ್ವಸತಿ ಚಟುವಟಿಕೆಗಳು, ವಿಶೇಷಚೇತನರ ಸ್ನೇಹಿ ವಾತಾವರಣ ನಿರ್ಮಾಣ, ಒಬ್ಬರು ವಿಶೇಷಚೇತನರು ಹಾಗೂ ಒಬ್ಬರು ಸಮುದಾಯದವರಿಂದ ಅಭಿಪ್ರಾಯ ಹಂಚಿಕೆಯ ವೀಡಿಯೊ ರೆಕಾರ್ಡ್ (ಗ್ರಾಮೀಣ/ ನಗರ ಪುನರ್ವಸತಿ ಕಾರ್ಯಕರ್ತರು ಹಾಗೂ ಗ್ರಾಮ/ ಪಟ್ಟಣ ಪಂಚಾಯಿತಿಯ ಕುಟುಂಬದವರನ್ನು ಹೊರತುಪಡಿಸಿ). ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್, 25 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಎಸ್‍ವಿವೈಎಂನ “ವಿಶೇಷಚೇತನರ ಸಹಾಯವಾಣಿ”ಗೆ ದೂರವಾಣಿ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳುವುದು. ಸಹಾಯವಾಣಿ ಸಂಖ್ಯೆ: 9880005297 ಮತ್ತು 08272-298322 ನ್ನು ಬೆಳಗ್ಗೆ 8.30 ರಿಂದ ಸಂಜೆ 5 ಗಂಟೆವರೆಗೆ ಸಂಪರ್ಕಿಸಬಹುದು. ಅಭ್ಯರ್ಥಿಗಳಿಂದ ಪ್ರಶಸ್ತಿಗಳಿಗೆ ಅರ್ಜಿ ಸ್ವೀಕರಿಸಿದ ನಂತರ ಮೌಲ್ಯಮಾಪನ ತಂಡವು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ತಾವು ನೀಡಿರುವ ಮಾಹಿತಿ/ ದಾಖಲೆಗಳನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ನಂತರ ಮೌಲ್ಯಮಾಪನದ ವರದಿಯನ್ನು ತೀರ್ಪುಗಾರರ ಮುಂದೆ ಮಂಡಿಸಲಾಗುತ್ತದೆ. ವರದಿಯನ್ನು ಗಮನಿಸಿದ ತೀರ್ಪುಗಾರರ ತಂಡವು ಮಾದರಿ ವಿಶೇಷಚೇತನರ ಸ್ವ-ಸಹಾಯ ಸಂಘ ಮತ್ತು ಮಾದರಿ ಗ್ರಾಮ/ ಪಟ್ಟಣ ಪಂಚಾಯಿತಿಗಳನ್ನು ಆಯ್ಕೆ ಮಾಡುತ್ತದೆ ಮತ್ತು ತೀರ್ಪುಗಾರರ ತಂಡದ ನಿರ್ಧಾರವೇ ಅಂತಿಮವಾಗಿದೆ. ಡಿಸೆಂಬರ್ ತಿಂಗಳ ನಾಲ್ಕನೇ ವಾರದಲ್ಲಿ ನಡೆಯುವ ಅಂತರರಾಷ್ಟ್ರೀಯ ವಿಶೇಷಚೇತನರ ದಿನಾಚರಣೆಯ ಕಾರ್ಯಕ್ರಮದಂದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಅರ್ಜಿಯನ್ನು ಸಲ್ಲಿಸುವ ಆನ್‍ಲೈನ್ ಲಿಂಕ್: ಮಾದರಿ ವಿಶೇಷಚೇತನರ ಸ್ವ-ಸಹಾಯ ಸಂಘ- https://www.appsheet.com/start/d3a7e74a-877a-4b42-b125-1c68d02c9617 ಮಾದರಿ ಗ್ರಾಮ/ ಪಟ್ಟಣ ಪಂಚಾಯಿತಿ – https://www.appsheet.com/start/83ed3b99-f62c-4c9b-a665-6e39f3cc72ff