ಮಡಿಕೇರಿ ಡಿ.2 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಮಾರು 60ಕ್ಕೂ ಹೆಚ್ಚು ಪುಸ್ತಕಗಳು ಹಾಗೂ ಅರೆಭಾಷೆ ಸಾಹಿತಿಗಳ ಪುಸ್ತಕಗಳು ಸೇರಿ 88 ಪುಸ್ತಕಗಳು ಮತ್ತು ದಿ. ಪಟ್ಟಡ ಪ್ರಭಾಕರರ 142 ಕೊಡಗು ಸಂಗಾತಿ ಸಂಚಿಕೆ ಎಲ್ಲದಕ್ಕೂ ಡಿಜಿಟಲ್ ಮಾರ್ಕೆಟ್ ಒದಗಿಸಲಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುವಂತಾಗಬೇಕು ಎಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನ ಸಲಹೆ ನೀಡಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಸಭಾಭವನದಲ್ಲಿ ಭಾನುವಾರ ನಡೆದ ‘ಅರೆಭಾಷೆ ಗಡಿನಾಡ ಉತ್ಸವ’ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಉಳಿಸಿ, ಸಾಹಿತ್ಯ ಬೆಳೆಸುವ ಕುರಿತು ಉಪನ್ಯಾಸ ನೀಡಿದರು. ಅಕಾಡೆಮಿ ಪ್ರಕಟಿತ ಪುಸ್ತಕಗಳಿಗೆ ಈಗಾಗಲೇ ಟಿಜಿಟಲ್ ಟಚ್ ನೀಡಲಾಗಿದ್ದು, ಇದನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು ಎಂದು ಅವರು ತಿಳಿಸಿದರು. ಪುಸ್ತಕಗಳಿಗೆ ಡಿಜಿಟಲ್ ಟಚ್ ನೀಡುವುದರಿಂದ ಅರೆಭಾಷೆ ಪುಸ್ತಕಗಳನ್ನು ಪ್ರಪಂಚದ ಎಲ್ಲಿ ಬೇಕಾದರೂ ಅಧ್ಯಯನ ಮಾಡಬಹುದು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಯಬೇಕು ಎಂದರು. ಅರೆಭಾಷೆಯಯಲ್ಲಿ ಶಬ್ದಕೋಶ ಮತ್ತು ಪದಕೋಶ ಸಂಗ್ರಹಿಸಿ, ಪುಸ್ತಕ ಪ್ರಕಟಿಸುವಂತಾಗಬೇಕು. ಇದರಿಂದ ಅರೆಭಾಷೆಯದ್ದೇ ಸಂಸ್ಕೃತಿ ಮತ್ತು ಭಾಷೆಯ ಗುರುತಿಸುವಿಕೆ ಸಾಧ್ಯವಾದರೆ ಮುಂದೆ ‘ಐಎಸ್ಒ ಕೋಡ್’ ಪಡೆಯಲು ಸಾಧ್ಯ ಎಂದು ವಿಶ್ವನಾಥ ಬದಿಕಾನ ಪ್ರತಿಪಾದಿಸಿದರು. ಈ ಹಿಂದಿನ ಅಕಾಡೆಮಿ ಅವಧಿಯಲ್ಲಿ ಅರೆಭಾಷೆಯಲ್ಲಿ 50 ಸಾವಿರ ಪದ ಸಂಗ್ರಹಿಸುವ ಗುರಿ ಹೊಂದಲಾಗಿತ್ತು, ಆ ನಿಟ್ಟಿನಲ್ಲಿ 18 ಸಾವಿರ ಪದ ಸಂಗ್ರಹಿಸಿ ‘ಶಬ್ದಕೋಶ’ ಪ್ರಕಟಿಸಲಾಯಿತು ಎಂದು ಅವರು ಸ್ಮರಿಸಿದರು. ಈ ಕಾರ್ಯವನ್ನು ಮುಂದುವರೆಸಬೇಕು ಸಲಹೆ ನೀಡಿದರು. ಅರೆಭಾಷೆಯಲ್ಲಿ ಸಂಶೋಧನೆ ಹೆಚ್ಚಾಗಬೇಕು. ಕತೆ, ಕವನ, ಕಮ್ಮಟಗಳು ಹಾಗೂ ವಿಚಾರ ಸಂಕಿರಣಗಳು ನಡೆಯಬೇಕು ಎಂದರು.ಯಾವುದೇ ಭಾಷೆಗೆ ಗಡಿ ಇಲ್ಲ, ಆದರೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಭಾಷೆಗೆ ಗಡಿ ನಿರ್ಧಾರವಾಗಿದೆ. ಕೃಷಿ ಸಂಸ್ಕೃತಿಯ ನೆಲೆಯಲ್ಲಿ ಯಾವುದೇ ಭಾಷೆ ಗುರುತು ಪಡೆದುಕೊಂಡಿದೆ. ಬದಲಾದಂತೆ ಭಾಷೆ ಸಂಸ್ಕೃತಿಯೂ ಬದಲಾಗುತ್ತದೆ. ಆದ್ದರಿಂದ ಹಲವು ಶತಮಾನಗಳಿಂದ ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಉಳಿಸಿ, ಬೆಳೆಸಬೇಕು ಎಂದು ಅಕಾಡೆಮಿ ಮಾಜಿ ಸದಸ್ಯರು ಆದ ವಿಶ್ವನಾಥ ಬದಿಕಾನ ಹೇಳಿದರು. 1970 ರಲ್ಲಿ ಪ್ರೊ.ಕೋಡಿ ಕುಶಾಲಪ್ಪ ಗೌಡ ಅವರು ‘ಗೌಡ ಕನ್ನಡ’ ಬರೆದಿದ್ದಾರೆ. ಹಾಗೆಯೇ 1985ರಲ್ಲಿ ಪುರುಷೋತ್ತಮ ಬಿಳಿಮಲೆ ಅವರು ‘ಸುಳ್ಯ ಪರಿಸರದ ಗೌಡ ಜನಾಂಗ’ದ ಬಗ್ಗೆ ಬರೆದಿದ್ದಾರೆ. ಬಿಳಿಮಲೆಯವರ ಮಾರ್ಗದರ್ಶನದಲ್ಲಿ 1992ರಲ್ಲಿ ‘ಗೌಡ ಕನ್ನಡದ ಜನಪದ ಕತೆಗಳು’ ಎಂಬ ಶೀರ್ಷಿಕೆಯಲ್ಲಿ 120 ಜನಪದ ಕತೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲು ಸಾಧ್ಯವಾಗಿದೆ ಎಂದು ವಿಶ್ವನಾಥ ಬದಿಕಾನ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. 2011 ಡಿಸೆಂಬರ್ 15 ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ನಂತರ ಅರೆಭಾಷೆ ಬೆಳವಣಿಗೆಗೆ ಹಲವು ಕಾರ್ಯಯೋಜನೆ ರೂಪಿಸಲು ಸಾಧ್ಯವಾಗಿದೆ ಎಂದರು. ಸಂಸ್ಕೃತಿ ಮತ್ತು ಭಾಷೆ 20 ಕಿ.ಮೀ. ಅಂತರದಲ್ಲಿ ವ್ಯತ್ಯಾಸವಾಗುತ್ತದೆ. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಕಟ್ಟಿ ಬೆಳೆಸುವಂತಾಗಬೇಕು ಎಂದು ಅಕಾಡೆಮಿಯ ಮಾಜಿ ಸದಸ್ಯರು ನುಡಿದರು. ಭಾಷಾಭಿವೃದ್ಧಿಗೆ ಹತ್ತಿರದ ಭಾಷೆಯ ಪದಗಳನ್ನು ಬಳಸಿಕೊಳ್ಳುವಂತಾಗಬೇಕು. ಅರೆಭಾಷೆಯಲ್ಲಿ ಪ್ರತ್ಯೇಕ ಪದಗಳನ್ನು ಪಟ್ಟಿ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು. ಅರೆಭಾಷೆ ಗಡಿನಾಡ ಉತ್ಸವವು ಹಬ್ಬ, ಆಚರಣೆ, ಸಂಸ್ಕೃತಿ, ಪರಂಪರೆಯನ್ನು ಹೊಂದಿದೆ ಎಂದು ವಿಶ್ವನಾಥ ಬದಿಕಾನ ಅವರು ಹೇಳಿದರು. ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ದಶಮಾನದ ಸವಿನೆನಪಿಗಾಗಿ ಅರೆಭಾಷೆ ಗಡಿನಾಡ ಉತ್ಸವ ಆಯೋಜಿಲಾಗಿದೆ ಎಂದರು. ಗಡಿನಾಡ ಉತ್ಸವದಿಂದ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆವಣಿಗೆ ಜತೆಗೆ ವಿಚಾರಗೋಷ್ಠಿ, ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಹೀಗೆ ಸ್ಥಳೀಯರು ಒಂದೆಡೆ ಸೇರಲು ಸಹಕಾರಿ ಎಂದು ಅಧ್ಯಕ್ಷರು ತಿಳಿಸಿದರು. ಸುಳ್ಯ ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷರಾದ ಜಾಕೆ ಸದಾನಂದ ಅವರು ಮಾತನಾಡಿ ಅರೆಭಾಷೆಯನ್ನು ಮತ್ತಷ್ಟು ವ್ಯವಹಾರಿಕವಾಗಿ ಬಳಸುವಂತಾಗಬೇಕು ಎಂದು ಕರೆ ನೀಡಿದರು. ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ ಅವರು ಮಾತನಾಡಿ ಸಮಾಜದಲ್ಲಿನ ಪ್ರತಿಯೊಬ್ಬರನ್ನು ಗೌರವಿಸಬೇಕು, ಜೊತೆಗೆ ಭಾಷೆಯನ್ನು ಪ್ರೀತಿಸಬೇಕು ಎಂದು ನುಡಿದರು. ಮಂಡೆಕೋಲು ಗ್ರಾಮದ ಯಾದವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ರಾಮಚಂದ್ರ ಮಾಸ್ಟರ್ ಕೇನಾಜೆ ಅವರು ಮಾತನಾಡಿ ಕನ್ನಡ ಉಪ ಭಾಷೆಯಾದ ಅರೆಭಾಷೆಯನ್ನು ಕುಟುಂಬದಿಂದಲೇ ಮಾತನಾಡಬೇಕು. ಸಂಸ್ಕೃತಿ, ಸಮಾಜ, ಸಮುದಾಯ ಒಳಗೊಂಡಂತೆ ಭಾಷೆ, ಸಾಹಿತ್ಯವನ್ನು ಅಭಿವೃದ್ಧಿ ಪಡಿಸಬೇಕು ಎಂದರು.
ಸುಳ್ಯ ತಾಲ್ಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ವಿನುತಾ ಪಾತಿಕಲ್ಲು ಅವರು ಮಾತನಾಡಿ ವಿಶ್ವದಲ್ಲಿ ಹಲವು ಭಾಷೆಗಳು ಇಲ್ಲದಂತಾಗಿವೆ. ಆದ್ದರಿಂದ ನಾಡಿನ ಭಾಷೆ ಜತೆಗೆ ಸ್ಥಳೀಯ ಅರೆಭಾಷೆಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು ಎಂದು ಸಲಹೆ ನೀಡಿದರು. ಮಂಡೆಕೋಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ, ಸಹಕಾರ ಸಂಘದ ಸಿಇಒ ಜಿ.ಉದಯಕುಮಾರ್, ಗ್ರಾಮದ ಗೌಡ ಸಮಿತಿ ಉಸ್ತುವಾರಿ ನಿರ್ದೇಶಕರಾದ ಎಂ.ಎಚ್.ಸುರೇಶ್ ಮಾತನಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿಸಲಾಗಿರುವ ಕೃತಿಗಳ ಬಗ್ಗೆ ಸಾಹಿತಿ ಸಂಗೀತಾ ರವಿರಾಜ್, ಲೀಲಾ ದಾಮೋದರ, ಯೋಗಿಶ್ ಹೊಸೊಳಿಕೆ ಮತ್ತು ಹೇಮಲತಾ ಗಣೇಶ್ ಕಜೆಗದ್ದೆ ಅವರು ಮಾತನಾಡಿದರು. ಸ್ಥಳೀಯ ಕಲಾವಿದರಿಂದ ಅರೆಭಾಷೆ ವೈವಿದ್ಯ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ‘ಕಳೆದ ಒಂದುವರೆ ವರ್ಷದಿಂದ ಹೊರತರಲು ಬಾಕಿ ಇದ್ದ ಹಿಂಗಾರ ತ್ರೈಮಾಸಿಕ ಪುಸ್ತಕವನ್ನು ಒಟ್ಟು ಸೇರಿ ‘ಸಂಯುಕ್ತ ಸಂಚಿಕೆ’ ‘ಹಿಂಗಾರ’ ವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.’ ಅಕಾಡೆಮಿ ಸದಸ್ಯರಾದ ನಿಡ್ಯಮಲೆ ಡಾ.ಜ್ಞಾನೇಶ್, ಲೋಕೇಶ್ ಊರುಬೈಲು, ಚಂದ್ರಶೇಖರ ಪೇರಾಲು, ತೇಜಕುಮಾರ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಪಿ.ಎಸ್.ಕಾರ್ಯಪ್ಪ, ಲತಾ ಪ್ರಸಾದ್ ಕುದ್ಪಾಜೆ, ಸೂದನ ಈರಪ್ಪ, ಸಂದೀಪ್ ಪೂಳಕಂಡ, ಮೋಹನ್ ಪೊನ್ನಚ್ಚನ, ಗೋಪಾಲ್ ಪೆರಾಜೆ, ಕುದುಪಜೆ ಕೆ ಪ್ರಕಾಶ್ ಇತರರು ಇದ್ದರು.











