ವಿರಾಜಪೇಟೆ ಡಿ.2 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕಿರು ಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೊಡಗಿನ ಬಹುಸಂಸ್ಕೃತಿಯಿಂದ ಕರ್ನಾಟಕ ರಾಜ್ಯಕ್ಕೆ ಕೊಡುಗೆ ಎಂಬ ಕಿರು ಚಿತ್ರ ಸ್ಪರ್ಧೆಯಲ್ಲಿ ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಹತ್ತು ಸಾವಿರ ರೂ.ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರತಿಮಾ ರೈ ಅವರ ಮಾರ್ಗದರ್ಶನದಲ್ಲಿ ಅಂತಿಮ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳಾದ ಎಂ.ಜೆ.ಕುಟ್ಟಪ್ಪ, ಪ್ರಜ್ವಲ್, ಡಿ.ಎಸ್.ಜಗದೀಶ್, ಎಂ.ಎ.ರಾಹುಲ್ ಉತ್ತಪ್ಪ, ಬಿ.ಎಂ.ಹರ್ಷಿತ್, ಕೃತಿಕ್ ಗಣಪತಿ, ಟಿ.ಪಿ.ಪ್ರತ್ಯುಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವಿಜೇತ ತಂಡವನ್ನು ವಿದ್ಯಾಸಂಸ್ಥೆಯ ಪರವಾಗಿ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಕೆ.ಪಿ.ದೃಶ್ಯ ಅಭಿನಂದಿಸಿದ್ದಾರೆ. ಕರ್ನಾಟಕ ಸುವರ್ಣ ಸಂಭ್ರಮ 50 ರ ಅಂಗವಾಗಿ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಡಿ.3 ಮತ್ತು 4 ರಂದು ಮಂಗಳೂರಿನಲ್ಲಿ ನಡೆಯಲಿರುವ ಬಹುಸಂಸ್ಕೃತಿ ಉತ್ಸವದಲ್ಲಿ ಈ ಪುರಸ್ಕಾರವನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ.











