ವಿರಾಜಪೇಟೆ ಡಿ.2 NEWS DESK : ಕಲೆ ಎಂಬುದು ದೇವರ ಸೃಷ್ಟಿ. ಕಲೆಯು ಬಹುತೇಕರಿಗೆ ವಂಶಪಾರಂಪರ್ಯವಾಗಿ ಬರುತ್ತದೆ. ಕೆಲವರಿಗೆ ಗುರುಗಳಿಂದ ಅರಿತು ಬರುತ್ತದೆ. ತಮಗೆ ಲಭಿಸಿದ ಕಲೆಯನ್ನು ಸಾರ್ವಜನಿಕರ ಮುಂದೆ ಪ್ರದರ್ಶನ ಮಾಡಿದಾಗ ಕಲೆಗೆ ಅರ್ಥ ಬರುತ್ತದೆ ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ರವೀಂದ್ರ ಅಭಿಪ್ರಾಯಪಟ್ಟರು. ಕಾವೇರಿ ವಿದ್ಯಾ ಸಂಸ್ಥೆಗಳು, ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಮತ್ತು ಇಂಟೋಪಿಯಸ್ ನೃತ್ಯ ತರಬೇತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಲರವ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲೆಗೆ ಜಾತಿ, ಧರ್ಮ, ಕಪ್ಪು ಬಿಳುಪು ಎಂಬುದು ಮುಖ್ಯವಲ್ಲ. ಆದರೆ ವ್ಯಕ್ತಿಗಳು ಸಾಧರ ಪಡಿಸುವ ವಿಧಾನ ಹಾಗೂ ನಿಪುಣತೆಯನ್ನು ಪ್ರದರ್ಶನ ಮಾಡಿದಲ್ಲಿ ಮಾತ್ರ ಕಲೆ ಪ್ರಾಮುಖ್ಯತೆ ಪಡೆಯಬಹುದಾಗಿದೆ. ಸಂಘ ಸಂಸ್ಥೆಗಳು ಕಲೆಯನ್ನು ಬಿಂಬಿಸಲು ವೇದಿಕೆ ಕಲ್ಪಿಸಿಕೊಡುತ್ತದೆ. ವ್ಯಕ್ತಿಗಳು ಭಾಗವಹಿಸುವುದು ಮುಖ್ಯವಾಗುತ್ತದೆ. ದೇಶದ ಮಹೋನ್ನತವಾದ ಕಲಾ ಸಂಸ್ಕೃತಿಯು ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿದೆ. ಇಂತಹ ಧೀಮಂತ ಸಂಸ್ಕೃತಿಯನ್ನು ಮರೆಯದೇ ಉಳಿಸುವ ನಿಟ್ಟಿನಲ್ಲಿ ಸಮಾಜವು ಮುಂದಾಗಬೇಕು. ಸಂಸ್ಕೃತಿ ಮತ್ತು ಸಂಸ್ಕಾರಗಳಿಂದ ಮಾತ್ರ ವ್ಯಕ್ತಿಯು ಸಮಾಜದಲ್ಲಿ ಉನ್ನತ್ತಿಗೊಳ್ಳುತ್ತಾನೆ ಎಂದು ತಿಳಿಯಬೇಕು. ಈ ನಿಟ್ಟಿನಲ್ಲಿ ಕಾವೇರಿ ವಿದ್ಯಾ ಸಂಸ್ಥೆಯು ಆಯೋಜಿಸಿರುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಸಾಲ್ಡಾನಾ, ಕಾವೇರಿ ವಿದ್ಯಾ ಸಂಸ್ಥೆಗಳು ವಿದ್ಯಾಬ್ಯಾಸದೊಂದಿಗೆ ಎನ್.ಸಿ.ಸಿ., ಎನ್.ಎಸ್.ಎಸ್, ಕ್ರೀಡೆ, ಸಾಂಸ್ಕೃತಿಕ ವಿಷಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾದ ವಾತವರಣವನ್ನು ನಿರ್ಮಿಸಿಕೊಟ್ಟಿದೆ. ಜನಪದ ಕಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಲರವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜು ಸೇರಿದಂತೆ ಜಿಲ್ಲೆ ವಿವಿಧ ವಿಧ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದಾರೆ. ಕಾರ್ಯಕ್ರಮಕ್ಕೆ ಹಲವಾರು ದಾನಿಗಳು , ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ಆಯೋಜಕರ ಸಹಕಾರ ಗಮನಾರ್ಹವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಕೀಲ ಟಿ.ಪಿ.ಕೃಷ್ಣ ಅಳಿವಿನಂಚಿನಲ್ಲಿರುವ ಜನಪದ ಕಲೆಯಲ್ಲಿ ಸಂಸ್ಕೃತಿಯ ಸೊಗಡು ಅಡಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಅರಿಯುವ ಮೊದಲು ನಮ್ಮ ಮೂಲ ಸಂಸ್ಕೃತಿಯನ್ನು ಅರಿಯಬೇಕು. ಜನಪದ ಕಲೆಗಳು ಎಂದಿಗೂ ಮಾಸಿಹೋಗಬಾರದು. ಬದಲಿಗೆ ಯುವ ಪೀಳಿಗೆಯು ಕಲೆಯನ್ನು ಕಲಿಯುವಂತಾಗಬೇಕು. ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಮುಖ್ಯವಾಗಿದೆ. ಸೋಲು ಮತ್ತು ಗೆಲುವಿನ ಅಂತರವನ್ನು ಕಾಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಜನಪದ ಗುಂಪು ಗಾಯನ ಸ್ಪರ್ಧೆ,ಜನಪದ ಗುಂಪು ನೃತ್ಯ ಸ್ಪರ್ಧೆ ಹಾಗೂ ದೇಶಿಯ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಬಿಂಬಿಸುವ ಫ್ಯಾಷನ್ ಶೋ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಗುಂಪು ಗಾಯನ ಸ್ಪರ್ಧೆಯಲ್ಲಿ 9 ತಂಡಗಳು, ಗುಂಪು ನೃತ್ಯ ಸ್ಪರ್ಧೆಯಲ್ಲಿ ಒಟ್ಟು 6 ತಂಡಗಳು ಮತ್ತು ಫ್ಯಾಷನ್ ಶೋ ಸ್ಪರ್ಧೆಯಲ್ಲಿ 4 ತಂಡಗಳು ಭಾಗವಹಿಸಿದ್ದವು. ವಿಜೇತರಿಗೆ ಪಾರಿತೋಷಕ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಡಾ.ಕೆ.ಜಿ ವೀಣಾ, ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಎನ್.ಎಂ. ನಾಣಯ್ಯ, ಐ.ಕ್ಯೂ.ಎ.ಸಿ. ಸಂಯೋಜಕಿ ಪ್ರೀಯ ಪಿ.ಬಿ. ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಚಾಲಕರಾದ ನಾಗರಾಜು,ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕಿ ಅಕ್ಷತಾ ನಾಯಕ್, ಸಾಂಸ್ಕೃತಿಕ ಕಾರ್ಯದರ್ಶಿ ಸೋನಿ ಉಪಸ್ಥಿತರಿದ್ದರು. ದ್ವಿತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಕೌಶಲ್ಯ ಸ್ವಾಗತಿಸಿದರು. ಡಾ.ಮುತ್ತಮ್ಮ, ವಿದ್ಯಾರ್ಥಿಗಳಾದ ಫ್ಲೇವಿಯ ಜನಿಫರ್, ಅಂಜಲಿ, ಕೌಶಿಕ್ ನಿರೂಪಿಸಿದರು. ಬಿ.ಎ.ವಿಭಾಗದ ವಿದ್ಯಾರ್ಥಿನಿ ರಕ್ಷಿತಾ ಸರ್ವರನ್ನು ವಂದಿಸಿದರು.











