ಮಡಿಕೇರಿ ಡಿ.5 NEWS DESK : ಅಂಗನವಾಡಿ ಕಾರ್ಯಕರ್ತೆಯರನ್ನು ಅಂಗನವಾಡಿ ಶಿಕ್ಷಕಿ ಎಂದು ಪದನಾಮೀಕರಿಸಲು ಮತ್ತು ಡಿ.ದರ್ಜೆಯ ಸರ್ಕಾರಿ ನೌಕರರು ಎಂದು ಪರಿಗಣಿಸಲು ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತರ ಸಂಘ ಮನವಿ ಮಾಡಿದೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಮಡಿಕೇರಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರ ಮೂಲಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣನವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ವಿಧಾನ ಸೌಧದ ತಮ್ಮ ಕಛೇರಿಯಲ್ಲಿ ಸ್ವೀಕರಿಸಿದ ಎ.ಎಸ್.ಪೊನ್ನಣ್ಣ, ಅಂಗನವಾಡಿ ಕಾರ್ಯಕರ್ತೆಯರು ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಅವರ ಕೋರಿಕೆ ನ್ಯಾಯ ಸಮ್ಮತವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವ ಭರವಸೆ ನೀಡಿದರು.