ಮಡಿಕೇರಿ, ಡಿ.5 NEWS DESK : ಜಿಲ್ಲಾ ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪೈಕೇರ ಮನೋಹರ್ ಮಾದಪ್ಪ, ಕಾರ್ಯದರ್ಶಿಯಾಗಿ ಅಪ್ಪಾರಂಡ ವೇಣು ಪೊನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ವ್ಯಾಲಿ ವ್ಯೂ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಗುಮ್ಮಟಿರ ಕಿಲನ್ ಗಣಪತಿ ಮಾತನಾಡಿ, ರಾಜ್ಯದಲ್ಲಿ ಸಂಘಟನೆ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಮದ್ಯ ಮಾರಾಟಗಾರರು ಹಲವು ಸಮಸ್ಯೆಗಳ ನಡುವೆ ವ್ಯಾಪಾರ ಮಾಡಬೇಕಾದ ಸಂದಿಗ್ಧತೆ ಇದೆ. ರಾಜ್ಯಕ್ಕೆ ಅತೀ ಹೆಚ್ಚು ಆದಾಯ ಅಬಕಾರಿ ವಲಯ ಮೂಲಕ ಬರುತ್ತಿದ್ದರೂ ನಮ್ಮ ಬೇಡಿಕೆಗಳಿಗೆ ಸ್ಪಂದನ, ಸಮಸ್ಯೆಗಳು ಪರಿಹಾರವಾಗದಿರುವುದು ವಿಪರ್ಯಾಸ ಎಂದು ವಿಷಾದಿಸಿದರು. ಸನ್ನದುದಾರರ ಬೇಡಿಕೆ ಈಡೇರಿಕೆಗೆ ನಿರಂತರ ಹೋರಾಟ ನಡೆಯುತ್ತಿದ್ದು, ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಬಲವರ್ಧನೆಗೊಳಿಸಲಾಗುತ್ತಿದೆ. ಈಗಾಗಲೇ ವಿರಾಜಪೇಟೆ ತಾಲೂಕಿನಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅಬಕಾರಿ ವ್ಯಾಪ್ತಿಯ ಮೂರು ವಿಭಾಗದಲ್ಲಿ ಸಮಿತಿ ರಚನೆ ಮಾಡಲಾಗುವುದು. ಒಗ್ಗಟ್ಟಿನಿಂದ ಮುಂದುವರೆದರೆ ಸಮಸ್ಯೆಗಳ ಪರಿಹಾರ ಸಾಧ್ಯ. ಭ್ರಷ್ಟಾಚಾರ ನಿಯಂತ್ರಣವಾದರೆ ವ್ಯಾಪಾರಿಗಳು ತೊಡಕಿಲ್ಲದೆ ಕಾರ್ಯನಿರ್ವಹಿಸಬಹುದು ಎಂದರು. ಅಧಿಕಾರ ಸ್ವೀಕರಿಸಿ ನೂತನ ಅಧ್ಯಕ್ಷ ಮನೋಹರ್ ಮಾತನಾಡಿ, ಮದ್ಯ ವರ್ತಕರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ ಕಾರ್ಯನಿರ್ವಹಿಸಲಾಗುವುದು. ಇದಕ್ಕೆ ಮಾರಾಟಗಾರರ ಸಹಕಾರವೂ ಅತೀ ಮುಖ್ಯ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಸುಂದರ್, ಖಜಾಂಜಿ ಬಿ.ಎ.ಮಹಾಬಲ, ಗೌರವಾಧ್ಯಕ್ಷ ಬಾಬು ನಾಯ್ಡು, ನಿರ್ದೇಶಕರುಗಳಾದ ಕೆ.ಎಸ್. ಜಗದೀಶ್, ವಿ.ಎ.ಅಪ್ಪಚ್ಚು ಸೇರಿದಂತೆ ಇನ್ನಿತರರು ಹಾಜರಿದ್ದರು.