ಮಡಿಕೇರಿ ಡಿ.5 NEWS DESK : ನೆರೆಯ ಬಾಂಗ್ಲಾ ದೇಶದಲ್ಲಿರುವ ಮತಾಂಧ ಸರ್ಕಾರ, ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೊಡಗು ಜಿಲ್ಲಾ ಹಿಂದು ಹಿತರಕ್ಷಣಾ ಸಮಿತಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಸಿತು. ನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿಯ ಪ್ರಮುಖರು ಹಾಗೂ ಹಿಂದು ಕಾರ್ಯಕರ್ತರು ಬಾಂಗ್ಲಾದಲ್ಲಿನ ಹಿಂದು ಸಮುದಾಯದ ಮೇಲಿನ ದೌರ್ಜನ್ಯಗಳ ತಡೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ವಿಶ್ವ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಲು ಪ್ರಮುಖ ಪಾತ್ರ ವಹಿಸಬೇಕೆಂದು ಆಗ್ರಹಿಸಿದರು. ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ಬಜರಂಗದಳದ ದಕ್ಷಿಣ ಪ್ರಾಂತದ ಮಾಜಿ ಸಹ ಸಂಚಾಲಕ ಹಾಗೂ ಸಮಾಜ ಕಾರ್ಯಕರ್ತ ಮುರಳೀಕೃಷ್ಣ ಹಸಂತಡ್ಕ, ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಯಬೇಕು. ಸಮಾಜದ ಕಟ್ಟಕಡೆಯ ಹಿಂದುವಿಗೆ ಅನ್ಯಾಯವಾದರು ಇಡೀ ಹಿಂದು ಸಮಾಜ ದಿಟ್ಟ ಉತ್ತರವನ್ನು ನೀಡಲಿದೆ ಎಂದು ಎಚ್ಚರಿಕೆ ನೀಡಿದರು. ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಇಡೀ ವಿಶ್ವದಲ್ಲಿರುವ ಹಿಂದೂ ಬಾಂಧವರು ಧ್ವನಿ ಎತ್ತಿ ನಿಲ್ಲುವ ಮೂಲಕ, ಹಿಂದೂ ಸಮಾಜದ ನಾಶಕ್ಕೆ ಮುಂದಾಗುತ್ತಿರುವ ದುಷ್ಟಶಕ್ತಿಗಳಿಗೆ ನಡುಕವನ್ನುಂಟು ಮಾಡಬೇಕಾಗಿದೆ. ನಮ್ಮಲ್ಲಿನ ಜಾತಿಗಳ ಭಿನ್ನತೆಯನ್ನು ಬದಿಗೊತ್ತಿ ನಾವೆಲ್ಲರು ಹಿಂದು, ನಾವೆಲ್ಲರು ಒಂದು ಎನ್ನುವ ಮನೋಭಾವವನ್ನು ಮೂಡಿಸಿಕೊಂಡು ಹಿಂದೂ ಸಮಾಜ ಜಾಗೃತವಾಗಬೇಕು ಎಂದರು. ಪಾಕಿಸ್ತಾನದ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಇಂದಿನ ಬಾಂಗ್ಲಾದೇಶವಾದ ಅಂದಿನ ಪೂರ್ವ ಪಾಕಿಸ್ತಾನಕ್ಕೆ 1971ರಲ್ಲಿ ಸ್ವಾತಂತ್ರ್ಯವನ್ನು ಭಾರತ ದೊರಕಿಸಿಕೊಟ್ಟಿತ್ತು. ಅಂತಹ ಬಾಂಗ್ಲಾದಲ್ಲಿ ಇದೀಗ ಅಕ್ಷರಶಃ ಹಿಂದೂ ಸಮಾಜದ ಮೇಲೆ ಅಮಾನವೀಯವಾದ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದೆಯೆಂದು ಕಳವಳವ್ಯಕ್ತಪಡಿಸಿದರು. 1947ರ ಬಳಿಕ ಇಲ್ಲಿಯವರೆಗೆ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿ 3 ಕೋಟಿಯಷ್ಟು ಹಿಂದೂಗಳ ಹತ್ಯೆಗಳು ನಡೆದಿದೆ. ಅಂತಹ ಪರಿಸ್ಥಿತಿ ಇಲ್ಲೂ ತಲೆದೋರಬಹುದೆಂದು ಎಚ್ಚರಿಕೆಯ ನುಡಿಗಳನ್ನಾಡಿದ ಮುರಳೀಕೃಷ್ಣ ಹಿಂದುಗಳು ಜಾಗೃತರಾಗಬೇಕು ಮತ್ತು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
::: ಅಕ್ರಮ ಬಾಂಗ್ಲಾ ದೇಶಿಗರನ್ನು ಹೊರಗಟ್ಟಿ ::: ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ರಾಜ್ಯದ ನಕಲಿ ದಾಖಲೆಗಳನ್ನು ಹೊಂದಿರುವ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ. ಇಂತಹವರನ್ನು ಪೊಲೀಸ್ ಇಲಾಖೆ ಹುಡುಕಿ ಹೊರಗಟ್ಟಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಹಿಂದು ಹಿತರಕ್ಷಣಾ ಸಮಿತಿಯ ಪ್ರಮುಖರಾದ ಅಜಿತ್ ಕುಕ್ಕೇರ ಮಾತನಾಡಿ, ಬಾಂಗ್ಲಾ ಉದಯಕ್ಕೆ ಕಾರಣವಾದ ಭಾರತದ ಹಿಂದೂಗಳನ್ನು ಅಲ್ಲಿ ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಸ್ಲಾಮಿಕ್ ಭಯೋತ್ಪಾದಕ ಶಕ್ತಿಗಳು ಅಲ್ಲಿನ ಹಿಂದೂಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿವೆ. ಪ್ರಾಕೃತಿಕ ವಿಕೋಪಗಳ ಸಂದರ್ಭ ಅಲ್ಲಿನ ಮಂದಿಗೆ ಜಾತಿ ಮತಗಳ ಭೇದವಿಲ್ಲದೆ ಅನ್ನ ನೀಡಿದ ಇಸ್ಕಾನ್ ಸಂಸ್ಥೆಯ ಪ್ರಮಖರನ್ನು ಜೈಲಿಗಟ್ಟಿದೆ. ದೌರ್ಜನ್ಯವನ್ನು ನೊಡುತ್ತ ಹಿಂದೂ ಸಮಾಜ ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ಭಾರತದಲ್ಲಿ ನಾಲ್ಕು ಕೋಟಿಗೂ ಹೆಚ್ಚಿನ ಅಕ್ರಮ ಬಾಂಗ್ಲಾ ಪ್ರಜೆಗಳಿದ್ದಾರೆ. ಈ ನುಸುಳುಕೋರರನ್ನು ಗುರುತಿಸಿ ಹೊರದಬ್ಬಬೇಕೆಂದು ಒತ್ತಾಯಿಸಿದ ಅವರು, ದೌರ್ಜನ್ಯದÀ ಬಗ್ಗೆ ಕೇಂದ್ರ ಸರ್ಕಾರವನ್ನು ಜಾಗೃತಗೊಳಿಸಿ, ಆ ಮೂಲಕ ವಿಶ್ವ ಸಂಸ್ಯೆಯ ಕಣ್ತೆರೆಸುವ ಉದ್ದೇಶದಿಂದ ಹೋರಾಟವನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಬಾಂಗ್ಲಾದಲ್ಲಿ ಹಿಂದೂ ಸಮೂಹದ ಮೇಲೆ ನಡೆಯುತ್ತಿರುವ ಅಮಾನವೀಯ ದೌರ್ಜನ್ಯಗಳ ಬಗ್ಗೆ ಧ್ವನಿ ಎತ್ತಬೇಕಾದ ಮಾನವ ಹಕ್ಕು ಹೋರಾಟಗಾರರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ಸೋಗಲಾಡಿತನದ ಜಾತ್ಯತೀತವೆನ್ನುವ ರಾಜಕಾರಣಿಗಳು, ತುಷ್ಟೀಕರಣದ ರಾಜಕೀಯ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಖಂಡನೀಯವೆಂದರು. ವೇದಿಕೆಯಲ್ಲಿ ಆರ್‍ಎಸ್‍ಎಸ್ ಜಿಲ್ಲಾ ಪ್ರಮುಖರು ಹಾಗೂ ಸಮಾಜ ಕಾರ್ಯಕರ್ತ ಚಕ್ಕೇರ ಮನು ಕಾವೇರಪ್ಪ ಉಪಸ್ಥಿತರಿದ್ದರು. ಹಿಂದು ಹಿತರಕ್ಷಣಾ ಸಮಿತಿಯ ಸಂಚಾಲಕ ಸುರೇಶ್ ಮುತ್ತಪ್ಪ, ಪ್ರಮುಖರಾದ ಚೇತನ್ ಶಾಂತಿನಿಕೇತನ, ಸಂಪತ್ ಕುಮಾರ್, ನಾಪಂಡ ರವಿ ಕಾಳಪ್ಪ, ಸುನಿಲ್ ಸುಬ್ರಮಣಿ, ಶಾಂತೆಯಂಡ ರವಿ ಕುಶಾಲಪ್ಪ, ಅನಿತಾ ಪೂವಯ್ಯ, ಮಹೇಶ್ ಜೈನಿ, ಸುವಿನ್ ಗಣಪತಿ, ಬಿ.ಕೆ.ಅರುಣ್ ಕುಮಾರ್, ಬಿ.ಕೆ.ಜಗದೀಶ್, ಪಿ.ಎಂ.ರವಿ, ಆನಂದ ರಘು, ಸತೀಶ್ ಜೋಯಪ್ಪ, ಕೊಲ್ಲೀರ ಬೋಪಣ್ಣ, ಉಮಾ ಪ್ರಭು ಸೇರಿದಂತೆ ಹಲ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.