ಮಡಿಕೇರಿ ಡಿ.6 NEWS DESK : ಕಾಫಿ ಬೆಳೆಗಾರರು ಸರ್ಫೇಸಿ ಕಾಯ್ದೆಯಿಂದ ಎದುರಿಸುತ್ತಿದ್ದ ಕಿರುಕುಳ ಮತ್ತು ಆರ್ಥಿಕ ಒತ್ತಡದ ಸಮಸ್ಯೆಯನ್ನು ಕೇಂದ್ರ ಸರಕಾರ ಬಗೆಹರಿಸಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕೇಂದ್ರ ಕಾಫಿ ಮಂಡಳಿಯ ಸದಸ್ಯ ತಳೂರು ಎ.ಕಿಶೋರ್ ಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಲೋಕಸಭೆಯಲ್ಲಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಸರ್ಫೇಸಿ ಕಾಯ್ದೆಯಿಂದ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರದ ಗಮನ ಸೆಳೆಯುವ ಪ್ರಶ್ನೆ ಕೇಳಿದ್ದರು. ಇದಕ್ಕೆ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಕಾಫಿ ಕೃಷಿ ಸರ್ಫೇಸಿ ಕಾಯ್ದೆಯಡಿ ಬರುವುದಿಲ್ಲ ಎಂದು ಉತ್ತರ ನೀಡುವ ಮೂಲಕ ಕಾಫಿ ಬೆಳೆಗಾರರಿಗೆ ನೆರವಾಗಿದ್ದಾರೆ. ಇದು ಬೆಳೆಗಾರರಿಗೆ ಹರ್ಷವನ್ನು ತಂದಿದೆ ಎಂದು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಸರ್ಫೇಸಿ ಕಾಯ್ದೆಯಿಂದ ಮತ್ತಷ್ಟು ಒತ್ತಡ ಎದುರಿಸುತ್ತಿರುವ ಸಂದರ್ಭದಲ್ಲೇ ಕೇಂದ್ರ ಪ್ರಕಟಿಸಿರುವ ನಿರ್ಧಾರ ಬೆಳೆಗಾರರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಕಿಶೋರ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.