ಮಡಿಕೇರಿ ಡಿ.6 NEWS DESK : ಕೊಡಗಿನಲ್ಲಿ ಕೆಲವು ದುಷ್ಟಶಕ್ತಿಗಳು ಗೌಡ ಜನಾಂಗವನ್ನು ಗುರಿಯಾಗಿಸಿಕೊಂಡು ಆಗಿಂದಾಗ್ಗೆ ಅವಹೇಳನ ಮಾಡುವುದು, ಗೌಡ ಸಮಾಜಗಳು ಹಾಗೂ ಗೌಡ ಸಮುದಾಯದ ಜನರಿಗೆ ತೊಂದರೆಯಾಗುವಂತೆ ವರ್ತಿಸುವ ಕೃತ್ಯವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ವರ್ಷಗಳ ಹಿಂದೆ ಮಡಿಕೇರಿ ನಗರದ ಕೊಡಗು ಗೌಡ ವಿದ್ಯಾಸಂಘ ಹಾಗೂ ಕೊಡಗು ಗೌಡ ಸಮಾಜವನ್ನು ಗುರಿ ಮಾಡಿ ಇಲ್ಲಿನ ಕಟ್ಟಡಗಳು ಅನಧಿಕೃತವೆಂದು ವ್ಯಕ್ತಿಯೊಬ್ಬರು ತಕರಾರು ತೆಗೆದಿದ್ದರು. ಕೊಡಗಿನ ಇತಿಹಾಸ ಪ್ರಸಿದ್ಧ ಮಡಿಕೇರಿ ರಾಜರ ಕೋಟೆ ಒಳಭಾಗದಲ್ಲಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆ ಸ್ಥಾಪಿಸುವ ನಿರ್ಧಾರವನ್ನು ಇದೇ ವ್ಯಕ್ತಿ ವಿರೋಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಈ ವ್ಯಕ್ತಿಗೆ ದಂಡ ವಿಧಿಸಲ್ಪಟ್ಟಿದೆ. ಜನಾಂಗೀಯ ದ್ವೇಷವನ್ನು ಹುಟ್ಟು ಹಾಕುತ್ತಿರುವ ವ್ಯಕ್ತಿಯ ಹಿಂದೆ ಕೆಲವು ದುಷ್ಟಶಕ್ತಿಗಳ ಹುನ್ನಾರ ಅಡಗಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ಸೂಕ್ತ ತನಿಖೆ ಕೈಗೊಂಡು ದುಷ್ಟಕೂಟದ ಹುನ್ನಾರವನ್ನು ಬಯಲಿಗೆಳೆಯಬೇಕು ಮತ್ತು ದ್ವೇಷ ಹುಟ್ಟು ಹಾಕುವ ವ್ಯಕ್ತಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಸೂರ್ತಲೆ ಸೋಮಣ್ಣ ಒತ್ತಾಯಿಸಿದರು.
::: ಉದ್ಯಾನವನ ನಿರ್ಮಾಣವಾಗಲಿ :::
ಸುಮಾರು 50-60 ವರ್ಷಗಳ ಹಿಂದೆ ಮಡಿಕೇರಿ ನಗರ ವಾಸಿ, ಮೂಲತಃ ಮರಗೋಡು ಗ್ರಾಮದ ನಿವಾಸಿ ಅಂದಿನ ಕಂದಾಯ ಇಲಾಖೆಯ ಪಾರುಪತ್ತೆದಾರರಾಗಿದ್ದ ಚೆರಿಯಮನೆ ಪೊನ್ನಪ್ಪ ಅವರು ಮಡಿಕೇರಿ ನಗರದ ಮಕ್ಕಳ ಹಿತಕ್ಕಾಗಿ ಗೌಳಿಬೀದಿಯಲ್ಲಿ ಸುಮಾರು 50 ಸೆಂಟುಗಳಷ್ಟು ತನ್ನ ಖಾಲಿ ಜಾಗವನ್ನು ಉದ್ಯಾನವನ ನಿರ್ಮಿಸುವ ಸದುದ್ದೇಶದಿಂದ ಅಂದಿನ ಪುರಸಭೆಗೆ ದಾನವಾಗಿ ನೀಡಿದ್ದರು. ಆದರೆ ಈಗ ಜಾಗ ಇಂದಿಗೂ ಅಭಿವೃದ್ಧಿ ಕಾಣದೆ ಖಾಲಿ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಜಾಗವನ್ನು ದುರುಪಯೋಗಪಡಿಸಿಕೊಂಡು ಅನುಪಯುಕ್ತ ವಸ್ತುಗಳನ್ನು ಹಾಕಿ ಕೊಂಪೆಯನ್ನಾಗಿ ಪರಿವರ್ತಿಸಲಾಗಿದೆ. ಆದ್ದರಿಂದ ನಗರಸಭೆ ಜಾಗದ ಸರ್ವೆ ಮಾಡಿಸಿ ದಾನಿಗಳಾದ ದಿವಂಗತ ಚೆರಿಯಮನೆ ಪೊನ್ನಪ್ಪ ಅವರ ಹೆಸರಿನಲ್ಲಿ ಉದ್ಯಾನವನ ನಿರ್ಮಿಸಬೇಕೆಂದು ಸೂರ್ತಲೆ ಸೋಮಣ್ಣ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಘಟಕದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ, ಬೆಂಗಳೂರು ಗೌಡ ಸಮಾಜದ ಉಪಾಧ್ಯಕ್ಷ ಕುದುಪಜೆ ಮೋಹನ್, ಮೈಸೂರು ಗೌಡ ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್ ಹಾಗೂ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಉಪಸ್ಥಿತರಿದ್ದರು.