ಮಡಿಕೇರಿ ಡಿ.6 NEWS DESK : ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಮೈಕಲರ ಶಾಲೆಯಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಬೇಕು. ಆಟೋಟವು ಸಹ ಇರಬೇಕು. ಆದರೆ ಮೊಬೈಲ್ ನೋಡುವ ಗೀಳು ಇರಬಾರದು ಎಂದು ಸಲಹೆ ಮಾಡಿದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ಸಂಗೀತ, ಕಲೆ, ನಾಟಕ, ನೃತ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಹೊಸತನ ಕಲಿಯಲು ಪ್ರಯತ್ನಿಸಬೇಕು, ಇದರಿಂದ ಪ್ರತಿಭೆ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು. ಪ್ರತಿಯೊಬ್ಬರ ಬದುಕಿನಲ್ಲಿ ಸಂತಸ, ನೆಮ್ಮದಿ ಇರಲು ಓದಿನ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರಾಣಿ, ಪಕ್ಷಿ, ಗಿಡ, ಮರ, ಹಸಿರು ನೋಡಿದರೆ ಒಂದು ರೀತಿ ಉಲ್ಲಾಸ ಉಂಟಾಗುತ್ತದೆ. ಇದರಿಂದ ಸಕಾರಾತ್ಮಕವಾಗಿ ಯೋಚಿಸಲು ಸಹಕಾರಿಯಾಗಲಿದೆ ಎಂದರು. ಸಂತ ಮೈಕಲರ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ಸಂಜಯ್ ಕುಮಾರ್ ಮಾತನಾಡಿ ‘ಪ್ರತಿಯೊಬ್ಬರಲ್ಲಿಯೂ ಹುಟ್ಟುವಾಗ ಉಸಿರು ಇರುತ್ತದೆ, ಸಾಯುವಾಗ ಹೆಸರು ಇರುತ್ತದೆ. ಆದ್ದರಿಂದ ಉಸಿರು ಮತ್ತು ಹೆಸರಿನ ನಡುವೆ ಕೆಸರು ಎರಚದೆ, ಸಮಾಜದಲ್ಲಿ ಉತ್ತಮ ಬದುಕು ನಡೆಸುವತ್ತ ಚಿಂತಿಸಬೇಕು. ಆ ನಿಟ್ಟಿನಲ್ಲಿ ಕಲೆ, ಸಂಸ್ಕøತಿ, ಸಂಗೀತ, ಸಾಹಿತ್ಯ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.’ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸಹ ಒಂದಲ್ಲ ಒಂದು ಪ್ರತಿಭೆ ಇದ್ದು, ಆಸಕ್ತಿ ಇರುವ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆಯತ್ತ ಮುನ್ನಡೆಯಬೇಕು. ಪೋಷಕರು ಸಹ ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಓದಿನ ಜೊತೆಗೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಕೌಶಲ್ಯತೆ ಬೆಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೋಮಶೇಖರ ಅವರು ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಆದ್ದರಿಂದ ನಿರಂತರ ಸ್ಪರ್ಧೆಯಿಂದ ಒಂದಲ್ಲ ಒಂದು ದಿನ ಯಶಸ್ಸು ಪಡೆಯಬಹುದು. ಆ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಸಲಹೆ ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಶಿಕ್ಷಣಾಧಿಕಾರಿ ಮಹದೇವ ಸ್ವಾಮಿ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಬಿಂಧು, ಡಾ.ಸದಾಶಿವ ಪಲ್ಲೇದ್, ಪಿ.ಎ.ಪ್ರವೀಣ್, ಎ.ಸೋಮಯ್ಯ, ಬಿ.ಟಿ.ಪೂರ್ಣೇಶ್, ಮೋಹನ್ ಪೆರಾಜೆ, ಕಿರಣ್ ಪಿ.ಎಂ., ಅಶೋಕ್ ಕೆ.ಜಿ., ಇತರರು ಇದ್ದರು. ಭಾಷಣ ಸ್ಪರ್ಧೆ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಪ್ರಬಂಧ ರಚನೆ, ಚಿತ್ರಕಲೆ, ಮಿಮಿಕ್ರಿ, ಚರ್ಚಾ ಸ್ಪರ್ಧೆ, ರಂಗೋಲಿ, ಗಝಲ್, ಕವನ/ ಪದ್ಯವಾಚನ, ಆಶುಭಾಷಣ ಸ್ಪರ್ಧೆ, ಹೀಗೆ ವಿವಿಧ ಪ್ರತಿಭಾ ಕಾರಂಜಿ ಹಾಗೂ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಜಿಲ್ಲೆಯ ನಾನಾ ಶಾಲೆಗಳಿಂದ 135 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.