ಕುಶಾಲನಗರ ಡಿ.6 NEWS DESK : ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಹಾಗೂ ಶ್ರೀ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ಡಿ.12 ಮತ್ತು 13 ರಂದು 39ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಉಪಾಧ್ಯಕ್ಷ ನವನೀತ್ ಪೊನ್ನೇಟಿ ಹಾಗೂ ಕಾರ್ಯದರ್ಶಿ ಕೆ.ವಿ.ಅನುದೀಪ್ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿ.12 ರಂದು ರಥಬೀದಿಯಲ್ಲಿರುವ ಆಂಜನೇಯ ದೇವಾಲಯದಲ್ಲಿ ಪವನಾಮ ಹೋಮ ನಡೆಯಲಿದೆ. 13 ರಂದು ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನಪ್ರಸಾದ ಸಂತರ್ಪಣೆ ನೆರವೇರಿಸಲಾಗುವುದು. ಸಂಜೆ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ಬೈಚನಹಳ್ಳಿ ಮಾರಮ್ಮ ದೇವಾಲಯದವರೆಗೆ ನಡೆಯಲಿದೆ. ಮಧ್ಯಾಹ್ನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಗುವುದು. ಸಂಜೆ ಕೊಡಗಿನ ವಿವಿಧೆಡೆಗಳಿಂದ ಸೇರಿದಂತೆ ನೆರೆಯ ಮೈಸೂರು, ಹಾಸನ ಜಿಲ್ಲೆಗಳಿಂದ ಸುಮಾರು 20 ರಿಂದ 25 ಸಾವಿರ ಮಂದಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಸ್ತ ಹಿಂದೂ ಬಾಂಧವರು ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದರು. ಇದೇ ಸಂದರ್ಭ ಸಮಿತಿ ವತಿಯಿಂದ 2025 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ವಿ.ಹೆಚ್.ಪ್ರಶಾಂತ್, ಉಪಾಧ್ಯಕ್ಷ ವಿನು ಟಿ, ಖಜಾಂಚಿ ಕೆ.ಎನ್.ಚಂದ್ರಶೇಖರ್, ಸಹ ಕಾರ್ಯದರ್ಶಿ ಸೌರವ್ ಇದ್ದರು.