ಮಡಿಕೇರಿ ಡಿ.7 NEWS DESK : ಆರೋಗ್ಯಯುತ ಸಮಾಜದೆಡೆಗೆ ಮುನ್ನಡೆಯಲು ನಮಗುಳಿದಿರುವ ಏಕೈಕ ಹಾದಿಯಾಗಿರುವ ಸಂವಿಧಾನದ ಪರವಾದ ಧ್ವನಿ ಮೊಳಗಿದಾಗ ಮಾತ್ರ ಸಮಾನತೆ ಮತ್ತು ಭಾತೃತ್ವವನ್ನು ಉಳಿಸಲು ಸಾಧ್ಯವೆಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ‘ಸಂವಿಧಾನ ಓದು ಅಧ್ಯಯನ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಸರಿಯಾದ ನಿರ್ಧಾರಗಳನ್ನು ತಳೆಯಲು ಸಂವಿಧಾನದ ಅರಿವು ನಮಗೆ ಬೇಕಾಗಿದೆ. ಬದುಕಿನಲ್ಲಿ ಕಾನೂನಿನ ಪರಿಜ್ಞಾನದೊಂದಿಗೆ ಮೌಲ್ಯಗಳು ಅತ್ಯವಶ್ಯವೆಂದು ಹೇಳಿದರು.
::: ಜಿಲ್ಲೆಗೆ 100 ಮಂದಿ ::: ಶಾಂತಿಯುತವಾದ, ಭಾತೃತ್ವದ ಸಮಾನತೆಯ ಸಮ ಸಮಾಜದ ನಿಮಾಣಕ್ಕೆ ‘ಸಂವಿಧಾನ’ ಒಂದೇ ಹಾದಿಯಾಗಿದ್ದು, ಈ ನಿಟ್ಟಿನಲ್ಲಿ ಸಂವಿಧಾನದ ಪರವಾದ ಧ್ವನಿಗಳನ್ನು ಹುಟ್ಟು ಹಾಕಲು ಸಂವಿಧಾನದ ಓದು ಶಿಬಿರಗಳನ್ನು ರಾಜ್ಯವ್ಯಾಪಿ ಆಯೋಜಿಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಆಳವಾಗಿ ಅರಿತ ನೂರು ಮಂದಿಯನ್ನು ಸಜ್ಜುಗೊಳಿಸುವುದು ಕಾರ್ಯಕ್ರಮದ ಮೂಲ ಉದ್ದೇಶವೆಂದರು. ಸಂವಿಧಾನವನ್ನು ಅರಿತು ಬದುಕನ್ನು ಹಸನಾಗಿಸಿಕೊಳ್ಳುವುದರೊಂದಿಗೆ ಸವಾಲುಗಳನ್ನು ಮೆಟ್ಟಿ ನಿಲ್ಲೋಣವೆಂದು ಕರೆ ನೀಡಿದ ನಾಗಮೋಹನ್ ದಾಸ್ ಅವರು, ಇಂತಹ ಶಿಬಿರಗಳಿಂದ ಪಡೆದ ಜ್ಞಾನವನ್ನು ಕುಟುಂಬದೊಂದಿಗೆ, ನೆರೆ ಕರೆಯವರೊಂದಿಗೆ ಹಂಚಿಕೊಳ್ಳುವುದರ ಜೊತೆಯಲ್ಲೆ ನಾಡಿನುದ್ದಕ್ಕೂ ಪಸರಿಸಬೇಕಾಗಿದೆ ಎಂದು ತಿಳಿಸಿದರು.
::: ಫೀ.ಮಾ.ಕಾರ್ಯಪ್ಪರ ಮೌಲ್ಯಗಳಿಂದ ಸುಂದರ ಭಾರತ ::: 1962 ರ ಭಾರತ ಮತ್ತು ಪಾಕಿಸ್ತಾನದ ಯುದ್ಧದ ಸಂದರ್ಭ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಪುತ್ರ ಕೆ.ಸಿ.ಕಾರ್ಯಪ್ಪ ಅವರನ್ನು ಹಾಗೂ ಭಾರತೀಯ ಹಲವು ಯೋಧರನ್ನು ಪಾಕಿಸ್ತಾನ ಸೆರೆ ಹಿಡಿಯುತ್ತದೆ. ಆ ಸಂದರ್ಭ ಅಲ್ಲಿನ ಸೈನ್ಯದ ಮುಖ್ಯಸ್ಥರಾಗಿದ್ದ ಅಯೂಬ್ ಖಾನ್ ಅವರು, ಫೀ.ಮಾ. ಕೆ.ಎಂ.ಕಾರ್ಯಪ್ಪ ಅವರಿಗೆ ಪತ್ರವೊಂದನ್ನು ಬರೆದು, ನಿಮ್ಮ ಮಗನನ್ನು ತಾವು ಅಪೇಕ್ಷಿಸಿದರೆ ಬಿಡುಗಡೆ ಮಾಡುವುದಾಗಿ ತಿಳಿಸುತ್ತಾರೆ. ಆ ಸಂದರ್ಭ ಫೀ.ಮಾ.ಕಾರ್ಯಪ್ಪ ಅವರು ಮರು ಪತ್ರದಲ್ಲಿ ‘ತಮ್ಮ ಅಭಿಮಾನಕ್ಕೆ ಕೃತಜ್ಞತೆಗಳು. ಕೆ.ಸಿ.ಕಾರ್ಯಪ್ಪ ಅವರೊಂದಿಗೆ ಇರುವ ಸೈನಿಕರೆಲ್ಲರು ನನ್ನ ಮಕ್ಕಳೆ. ಬಿಡುಗಡೆ ಮಾಡುವುದಿದ್ದಲ್ಲಿ ಅವರೆಲ್ಲರನ್ನು ಬಿಡುಗಡೆ ಮಾಡಿ’ ಎಂದು ತಿಳಿಸುತ್ತಾರೆ. ಇಂತಹ ಉದಾತ್ತ ಮೌಲ್ಯಗಳನ್ನು ಪ್ರತಿಯೊಬ್ಬರು ಹೊಂದಿದಲ್ಲಿ ಸರ್ವ ಸುಂದರ ಭಾರತವನ್ನು ನಿರ್ಮಾಣ ಮಾಡಬಹುದೆನ್ನುವ ಆಶಯವನ್ನು ವ್ಯಕ್ತಪಡಿಸಿದರು. ಮೌಲ್ಯಗಳಿಲ್ಲದೆ ಬೆಳೆಯುವ ವಿಜ್ಞಾನ ತಂತ್ರಜ್ಞಾನದಿಂದ ಶಾಂತಿ ಸಮಾಧಾನ, ಭಾತೃತ್ವಗಳು ಉಳಿಯಲಾರವು. ಮಹಾಭಾರತದಲ್ಲಿ ಪಾಂಡವ ಮತ್ತು ಕೌರವರ ನಡುವೆ ರಾಜ್ಯವನ್ನು ಪಾಲುಮಾಡಿಕೊಡುವ ವಿಚಾರವಾಗಿ ಸಮಸ್ಯೆ ತಲೆದೋರಿದ ಸಂದರ್ಭ, ರಾಜ್ಯದಲ್ಲಿ ಪಾಲನ್ನು ನೀಡಲು ಹಿಂದೇಟು ಹಾಕುವ ದುರ್ಯೋಧನನ ಬಳಿ ಮಹಾಜ್ಞಾನಿ ವಿದುರ ತೆರಳಿ, ನ್ಯಾಯ ನೀತಿಯಿಂದ ಮುನ್ನಡೆಯುವಂತೆ ಸಲಹೆ ನೀಡುತ್ತಾನೆ. ಈ ಹಂತದಲ್ಲಿ ನ್ಯಾಯ ನೀತಿಗೆ ದುರ್ಯೋಧನ ಸ್ಪಷ್ಟತೆಯನ್ನು ಕೋರುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ವಿದುರ ‘ಇತರರಿಂದ ಏನನ್ನು ನೀವು ಬಯಸುವುದಿಲ್ಲವೋ ಅದನ್ನು ನೀವು ಅವರಿಗೆ ನೀಡಬೇಡಿ’ ಎನ್ನುವ ಸಂದೇಶವನ್ನು ನೀಡುತ್ತಾನೆ. ಅದೇ ರೀತಿ ಸಮಾಜದಲ್ಲಿ ಮತ್ತೊಬ್ಬರಿಂದ ನಾವು ಬಯಸದ ಶೋಷಣೆ, ಹಿಂಸೆಗಳನ್ನು ನಾವು ಮತ್ತೊಬ್ಬರಿಗೆ ಎಂದಿಗೂ ನೀಡಲಾಗದೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಹೆಚ್.ಎಂ.ನಂದಕುಮಾರ್, ಸಂವಿಧಾನವನ್ನು ಬದಲಿಸಬೇಕು ಎನ್ನುವ ಮಾತುಗಳು ಎಂದಿಗೂ ಸಲ್ಲದು. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದ ಶೇ.90 ರಷ್ಟು ಮಂದಿಗೆ ಸಮಾನತೆಯನ್ನು ಒದಗಿಸಿದ್ದು ‘ಸಂವಿಧಾನ’ ಎಂದರು. ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ರಾಜ್ಯದುದ್ದಕ್ಕೂ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಸಂವಿಧಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಈ ರಾಷ್ಟ್ರಕ್ಕೆ ಅರ್ಪಿಸಿ 74 ವರ್ಷಗಳು ಸಂದಿದೆ. ಈ ಹಂತದಲ್ಲಿ ಇದರ ಅರಿವನ್ನು ಪಸರಿಸುವ ನಿಟ್ಟಿನಲ್ಲಿ ಸಂವಿಧಾನ ಓದು ಕಾರ್ಯಕ್ರಮ ಅರ್ಥಪೂರ್ಣ. ರಾಜ್ಯದ ಪ್ರತಿಯೊಂದು ಗ್ರಂಥಾಲಯಗಳಲ್ಲಿ ಸಂವಿಧಾನದ ಪ್ರತಿ ದೊರಕುವಂತೆ ಮಾಡುವ ಮತ್ತು ಶಾಲೆಗಳಲ್ಲಿ ವಾರಕ್ಕೊಮ್ಮೆಯಾದರು ಸಂವಿಧಾನದ ವಿಚಾರಗಳನ್ನು ತಿಳಿಸಿಕೊಡುವ ಕಾರ್ಯ ನಡೆಯುವಂತಾಗಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಎಂ.ಎಂ.ಮೆಹಬೂಬ್ ಅಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ, ಡಾ.ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿದರು. ಸಂವಿಧಾನ ಓದು ಅಭಿಯಾನದ ರಾಜ್ಯ ಸಂಚಾಲಕ ರಾಜು ಗೊರೂರು ಸ್ವಾಗತಿಸಿದರು, ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಧ್ಯಾಪಕರಾದ ಡಾ.ನರಸಿಂಹ ಅವರು ಕಾರ್ಯಕ್ರಮ ನಿರೂಪಿಸಿ, ಎಂ.ಎನ್.ರಾಜಪ್ಪ ವಂದಿಸಿದರು. ಇದೇ ಸಂದರ್ಭ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.











