ಕುಶಾಲನಗರ ಡಿ.7 NEWS DESK : ಹಾರಂಗಿ ಹಾಗೂ ಕಾವೇರಿ ನದಿಗಳ ಸಂಗಮ ಕ್ಷೇತ್ರ ಕೂಡಿಗೆಯಲ್ಲಿರುವ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವವು ಶ್ರದ್ದಾಭಕ್ತಿಯಿಂದ ನೆರವೇರಿತು. ಕೂಡಿಗೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿಗಳು ಜರುಗಿದವು. ಬಳಿಕ ಅಭಿಜಿನ್ ಲಗ್ನದಲ್ಲಿ ಸುಬ್ರಮಣ್ಯ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ರಥವು ದೇವಾಲಯದ ಕಿರಿದಾದ ರಸ್ತೆಯ ಮೂಲಕ ಸಾಗಿ ಬಂದು ರಾಜ್ಯ ಹೆದ್ದಾರಿ ಮಾರ್ಗವಾಗಿ ಕೂಡುಮಂಗಳೂರು ಗ್ರಾಮದ ಸರ್ಕಲ್ ವರೆಗೂ ಸಾಗಿ ಬಳಿಕ ಸ್ವಸ್ಥಾನಕ್ಕೆ ಮರಳಿತು.
ರಥೊತ್ಸವದ ಅಂಗವಾಗಿ ಕೂಡಿಗೆ ಹಾಗೂ ಕೂಡುಮಂಗಳೂರು ಹನುಮ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಚಂಡೆವಾದ್ಯ ಆಕರ್ಷಿಸಿತು.
ದೇವಾಲಯ ಸಮಿತಿಯ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಭಟ್ ಹಾಗೂ ಅರಕಲಗೂಡಿನ ಶ್ರೀ ಹರಿ ನೇತೃತ್ವದ ತಂಡದಿಂದ ಧಾರ್ಮಿಕ ವಿಧಿಗಳು ಜರುಗಿದವು. ರಥೋತ್ಸವದ ಅಂಗವಾಗಿ ಕೂಡಿಗೆಯಿಂದ ಕೂಡುಮಂಗಳೂರು ಗ್ರಾಮದ ವರೆಗೆ ಎಲ್ಲಾ ಅಂಗಡಿ ಮುಗಟ್ಟು, ಮನೆಗಳು, ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದವು. ಮುಂಜಾನೆಯಿಂದಲೇ ಭಕ್ತರು ಹಣ್ಣು ಕಾಯಿ ಸೇರಿದಂತೆ ಹರಕೆಯನ್ನು ದೇವರಿಗೆ ಸಲ್ಲಿಸಿದರು. ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಿಡಿಸಿದ ಆಕರ್ಷಕ ಮದ್ದು ಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಮನಸೂರೆಗೊಂಡಿತು. ಈ ಸಂದರ್ಭ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಯು. ಸೋಮಯ್ಯ, ಸೀನಿಯರ್ ಮ್ಯಾನೇಜರ್ ನವೀನ್, ಸತ್ಯನಾರಾಯಣ ವತ್ರಚಾರಣ ಸಮಿತಿ ಅಧ್ಯಕ್ಷ ಪೊನ್ನಪ್ಪ, ಕಾರ್ಯದರ್ಶಿ ಶಿವಕುಮಾರ್, ಹನುಮ ಸೇನಾ ಸಮಿತಿ ಅಧ್ಯಕ್ಷ ಶಿವಕುಮಾರ್ ಮೊದಲಾದವರಿದ್ದರು. ಕುಶಾಲನಗರ ಪೋಲಿಸ್ ಇಲಾಖೆಯ ಡಿ.ವೈ.ಎಸ್. ಪಿ. ಆರ್.ಜಿ. ಗಂಗಾಧರಪ್ಪ ನವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ಮೋಹನ್ ರಾಜ್, ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಪೋಲಿಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.