ಮಡಿಕೇರಿ ಡಿ.9 NEWS DESK : ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪವನ್ನು ಜನಪ್ರಿಯಗೊಳಿಸಲು ಹಾಗೂ ಉತ್ಪಾದನೆಯನ್ನು ಹೆಚ್ಚಿಸಿ ಸುಧಾರಿತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಬ್ರಾಂಡಿಂಗ್ ಮೂಲಕ ಜಾಗತಿಕ ಮಟ್ಟಕ್ಕೇರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆ ವತಿಯಿಂದ ಕರ್ನಾಟಕಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪವನ್ನು “ಝೇಂಕಾರ” ಬ್ರಾಂಡ್ ಹೆಸರು, ಟ್ಯಾಗ್‍ಲೈನ್ ಮತ್ತು ಲೋಗೋಗಳಡಿಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ “ಝೇಂಕಾರ” ಬ್ರಾಂಡ್ ಹೆಸರು, ಟ್ಯಾಗ್‍ಲೈನ್ ಮತ್ತು ಲೋಗೋಗಳು ಕಾನೂನಾತ್ಮಕವಾಗಿ ನೋಂದಣಿಯಾಗಿದೆ. ಕೊಡಗು ಜಿಲ್ಲೆಯಲ್ಲಿರುವ ಜೇನು ಕೃಷಿಕರು, ಜೇನುತುಪ್ಪ ಉತ್ಪಾದಕರು, ಜೇನು ಕೃಷಿ ಸಹಕಾರ ಸಂಘಗಳು ಪ್ರಸ್ತುತ “ಝೇಂಕಾರ” ಬ್ರಾಂಡ್ ಹೆಸರನ್ನು ಉಪಯೋಗಿಸಿಕೊಂಡು ಜೇನುತುಪ್ಪ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಇಲಾಖೆಯ ಮಾಲೀಕತ್ವದ ಜೇನುತುಪ್ಪದ ಬ್ರಾಂಡ್ ಹೆಸರಾದ ಝೇಂಕಾರ ಬ್ರಾಂಡ್‍ನಲ್ಲಿ ಜೇನುತುಪ್ಪವನ್ನು ಮಾರಾಟ ಮಾಡಲು ಇಚ್ಚಿಸುವ ಜೇನು ತುಪ್ಪದ ಉತ್ಪಾದಕರು/ ಸಂಗ್ರಹಕರು ನಿಗಧಿಪಡಿಸಿದ ರೂ.2500 ಗಳ ನೋಂದಣಿ ಶುಲ್ಕವನ್ನು ಪಾವತಿಸಿ, ಪಾವತಿಸಿದ ಚಲನ್ ಅನ್ನು ಸಂಬಂಧಪಟ್ಟ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು ರವರಿಗೆ ಸಲ್ಲಿಸಿದ ನಂತರ ಬ್ರಾಂಡ್ ಹೆಸರು ಝೇಂಕಾರ, ಲೋಗೋ ಮತ್ತು ಟ್ಯಾಗ್‍ಲೈನ್ ಅನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪ ನಿರ್ದೇಶಕರಾದ ಯೋಗೇಶ್ ಕೋರಿದ್ದಾರೆ.