ಮಡಿಕೇರಿ ಡಿ.12 NEWS DESK : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಡಿ.29 ರಂದು ವಿಶ್ವಮಾನವ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಈ ಸಂಬಂಧ ನಗರದ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕುವೆಂಪು ಅವರ ಕುರಿತು ಉಪನ್ಯಾಸ, ಕವನವಾಚನ, ಗಮಕ ವಾಚನ ಏರ್ಪಡಿಸುವುದು, ಗೀತಾಗಾಯನ ಮತ್ತಿತರ ಕಾರ್ಯಕ್ರಮವನ್ನು ಆಚರಿಸುವುದರ ಜೊತೆಗೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳನ್ನು ಆಹ್ವಾನಿಸುವುದರ ಜೊತೆಗೆ ಹಲವು ಕಾರ್ಯಕ್ರಮ ಆಯೋಜಿಸುವ ಸಂಬಂಧ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಸಂದೇಶಗಳನ್ನು ಯುವಜನರಿಗೆ ತಲುಪಿಸುವಲ್ಲಿ ಶ್ರಮಿಸಬೇಕು. ಕನ್ನಡ ನಾಡು ನುಡಿಗೆ ಕುವೆಂಪು ಅವರ ಕೊಡುಗೆ ಹೆಚ್ಚಿನದ್ದಾಗಿದ್ದು, ಆ ನಿಟ್ಟಿನಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಆಹ್ವಾನಿಸುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸುವಂತೆ ಅವರು ಸಲಹೆ ನೀಡಿದರು. ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ, ಹೀಗೆ ವಿವಿಧ ಇಲಾಖೆಗಳ ಸಹಕಾರ ಪಡೆದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವಂತೆ ಟಿ.ಪಿ.ರಮೇಶ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್ ಮಾತನಾಡಿ, ಕುವೆಂಪು ಅವರ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸುವಂತಾಗಬೇಕು. ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ ನಗರದ ಡಿಸಿಸಿ ಬ್ಯಾಂಕ್ ಬಳಿ ಇರುವ ಕುವೆಂಪು ಅವರ ಪುತ್ಥಳಿಯನ್ನು ಸ್ವಚ್ಛಗೊಳಿಸಬೇಕು. ಸುತ್ತಮುತ್ತ ಪರಿಸರವನ್ನು ಶುಚಿ ಮಾಡಬೇಕು ಎಂದು ಸಲಹೆ ನೀಡಿದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ ಅಮೆಚೂರು ಮಾತನಾಡಿ, ಕುವೆಂಪು ಅವರ ಸಂದೇಶಗಳು ಯುವಜನರಿಗೆ ತಲುಪಬೇಕು. ಕನ್ನಡ ನಾಡು ನುಡಿಗೆ ಕುವೆಂಪು ಅವರು ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಸಲಹೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಮಾತನಾಡಿ ಸರ್ಕಾರದ ನಿರ್ದೇಶನದಂತೆ ವಿಶ್ವ ಮಾನವ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಆಚರಿಸಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಜೊತೆ ಎಲ್ಲರೂ ಸಹಕರಿಸುವಂತೆ ಕೋರಿದರು. ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ಉಪನ್ಯಾಸ, ಕವನ ವಾಚನ, ಗಮಕ ವಾಚನ, ಹಾಡುಗಾರಿಕೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಪಿ.ಕವಿತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾರಾಯಣ ಇತರರು ಇದ್ದರು.