ಕುಶಾಲನಗರ ಡಿ.14 NEWS DESK : ಹನ್ನೆರಡನೇ ಶತಮಾನದ ವಚನಕಾರರ ಆಂದೋಲನ ಹಾಗೂ ಅವರ ಜೀವನ ಸಂದೇಶ ಮನುಕುಲದ ಉನ್ನತಿಗೆ ಮಹಾಚೈತನ್ಯದಾಯಕ ಎಂದು ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಕೊಡಗು ಜಿಲ್ಲಾ ಅಧಿಕಾರಿ ಪಿ.ಪಿ.ಕವಿತಾ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರದ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಆಯೋಜಿಸಿದ್ದ ಕುಶಾಲನಗರ ತಾಲ್ಲೂಕು ಕದಳಿ ವೇದಿಕೆಯ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜೊತೆಗೆ ಶರಣರ ಆದರ್ಶಗಳನ್ನು ಅರಿತು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಆದರ್ಶ ಪ್ರಾಯವಾದ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಮಡಿಕೇರಿ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹಾಗೂ ಕಣ್ಣಿನ ತಜ್ಞೆ ವಿಜಯಲಕ್ಷ್ಮಿ ಚೇತನ್ ಮಾತನಾಡಿ, ವಿದ್ಯಾರ್ಥಿನಿಯರಿಗೆ ಕಣ್ಣುಗಳ ಆರೋಗ್ಯದ ಕುರಿತು ಮಾಹಿತಿ ನೀಡಿ, ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಗಳ ಬಳಕೆಯ ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡ್ ಕಣ್ಣು ಮುಚ್ಚುವುದು, ಜೊತೆಗೆ ಕನಿಷ್ಟ 20 ಅಡಿಗಳಷ್ಟು ದೂರಕ್ಕೆ ಕಣ್ಣು ಹಾಯಿಸಿ ವಿಶ್ರಾಂತಿ ನೀಡುವ ಮೂಲಕ ದೇಹದ ಬಹು ಮುಖ್ಯ ಅಂಗ ಕಣ್ಣನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕಿದೆ ಎಂದರು.
ತಾಲ್ಲೂಕು ಕದಳಿ ವೇದಿಕೆಯ ನೂತನ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ಪ್ರಮಾಣ ವಚನ ಬೋಧಿಸಿದ ಮಡಿಕೇರಿ ನಗರ ಸಭೆ ಮಾಜಿ ಸದಸ್ಯೆ ಹಾಗೂ ಜಿಲ್ಲಾ ಕದಳಿ ವೇದಿಕೆ ಗೌರವಾಧ್ಯಕ್ಷೆ ಕಮಲಮ್ಮ ಮುರುಗೇಶ್ ಮಾತನಾಡಿ, ಬಸವಾದಿ ಶರಣರ ವಿಚಾರಧಾರೆಗಳು ಮನುಷ್ಯನಲ್ಲಿನ ಅಂಧಕಾರವನ್ನು ತೊಡೆದು ಅವರ ಬದುಕಲ್ಲಿ ಪ್ರಜ್ವಲನ ಮೂಡಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕಲಬೇಡ – ಕೊಲಬೇಡ ಎಂಬ ಬಸವೇಶ್ವರರ ಸಪ್ತಸೂತ್ರವನ್ನು ಅರಿತು ಅದರಂತೆ ನಡೆಯಲು ಕರೆ ನೀಡಿದರು. ಹಿಂದುಳಿದ ವರ್ಗಗಳ ಇಲಾಖೆಯ ತಾಲ್ಲೂಕು ಅಧಿಕಾರಿ ಸ್ವಾಮಿ ಮಾತನಾಡಿ, ನಮ್ಮ ಪೂರ್ವಜರು ಶರಣರ ವಚನಗಳನ್ನು ಬಾಯಿಪಾಠ ಮಾಡಿದ್ದರು. ವಚನಗಳ ಸಾರದಂತೆಯೇ ಅವರು ಬದುಕಿದ್ದರು. ಹಾಗಾಗಿ ಅಂದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಸಾಮರಸ್ಯ ಇತ್ತು. ಆದರೆ ಇಂದಿನ ಸಾಮಾಜಿಕ ಆವಾಂತರಗಳಿಗೆ ವಚನ ಸಾಹಿತ್ಯದ ಅಧ್ಯಯನವೇ ದಿವ್ಯ ಔಷಧಿ ಎಂದರು. ಕದಳಿ ವೇದಿಕೆಯ ನೂತನ ಅಧ್ಯಕ್ಷೆ ಬಿ.ಬಿ.ಹೇಮಲತಾ ಮಾತನಾಡಿ, ತಾಲ್ಲೂಕಿನಾದ್ಯಂತ ಮನೆ ಮನೆಗಳಲ್ಲಿ ಅಕ್ಕಮಹಾದೇವಿ ಹಾಗೂ ಬಸವಣ್ಣರ ತತ್ವಾದರ್ಶಗಳನ್ನು ಸಾರಲು ಮಹಿಳಾ ಘಟಕ ಕದಳಿ ವೇದಿಕೆಯನ್ನು ಸಜ್ಜುಗೊಳಿಸುವುದಾಗಿ ಹೇಳಿದರು. ಜಿಲ್ಲಾ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಕರುಣ್, ವಸತಿ ನಿಲಯದ ಮೇಲ್ವಿಚಾರಕಿ ಸುಕನ್ಯಾ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ದತ್ತಿದಾನಿಗಳಾದ ಮಡಿಕೇರಿಯ ಮುರುಗೇಶ್, ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಗೌರವಾಧ್ಯಕ್ಷೆ ವಿಜಯಪಾಲಾಕ್ಷ, ಯಶೋಧ ಮಹದೇವಪ್ಪ, ಕೋಶಾಧಿಕಾರಿ ವೇದಾವತಿ, ಜಿಲ್ಲಾ ನಿರ್ದೇಶಕಿ ಮನುಜಗದೀಶ್, ಪದಾಧಿಕಾರಿಗಳಾದ ಲೇಖನಾ ಧರ್ಮೇಂದ್ರ, ಮೋಹಿನಿ ನಟರಾಜು, ಸುಶೀಲಾ ಪುಟ್ಟರಾಜು, ಸರೋಜಾ ಆರಾಧ್ಯ, ಶಿಕ್ಷಕರಾದ ಇಂದಿರಾ, ಉಷಾ ನಾಗೇಶ್ ಇದ್ದರು. ಇದೇ ಸಂದರ್ಭ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಪಿ.ಪಿ.ಕವಿತಾ, ಮಡಿಕೇರಿಯ ನೇತ್ರ ತಜ್ಞೆ ವಿಜಯಲಕ್ಷ್ಮಿ ಹಾಗೂ ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ಅವರನ್ನು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗೌರವಿಸಲಾಯಿತು.