ಸುಂಟಿಕೊಪ್ಪ,ಡಿ.18 NEWS DESK : ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಕಾವೇರಿ ನದಿ ಸ್ವಚ್ಚತೆಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಹಾಗೂ ವಿಜ್ಞಾನ ಸಮಾವೇಶದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರು ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಎನ್.ಎ.ಶ್ರೀಶಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ, ಕನ್ನಡ ನಾಡಿನ ಜೀವನದಿ ಮತ್ತು ತಮಿಳುನಾಡಿನ ಭಾಗ್ಯಲಕ್ಷ್ಮಿ ಎಂದು ಕರೆಸಿಕೊಂಡಿರುವ ಪವಿತ್ರ ನದಿ ಕಾವೇರಿ ಕಲುಷಿತಗೊಳ್ಳುತ್ತಿರುವುದು ತೀರಾ ಗಂಭೀರ ವಿಚಾರವಾಗಿದೆ. ಕೃಷಿ ಮತ್ತು ಜೀವನಕ್ಕೆ ಆಧಾರವಾಗಿರುವ ನದಿಯನ್ನು ಕಲುಷಿತಗೊಳ್ಳದಂತೆ ನಾವೆಲ್ಲಾರೂ ಜಾಗೃತಿ ವಹಿಸುವುದು ಅತ್ಯವಶ್ಯವಾಗಿದೆ. ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಕಾವೇರಿ ನದಿ ಕಲುಷಿತವಾಗುತ್ತಿರುವ ಬಗ್ಗೆ ಗಮನಸೆಳೆದ ಶ್ರೀಶಾ ಅವರ ಪ್ರಯತ್ನ ಅಭಿನಂದನಾರ್ಹ ಎಂದು ವಿ.ಜಿ.ಲೋಕೇಶ್ ಹೇಳಿದರು. ಸುಂಟಿಕೊಪ್ಪ ನಾಡು ಪ್ರೌಢಶಾಲೆ ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಮಾತನಾಡಿ, ಎನ್.ಎ.ಶ್ರೀಶಾಳ ವಿದ್ಯಾಭ್ಯಾದ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಆಗ್ರಹಿಸಿದರು. ಸುಂಟಿಕೊಪ್ಪ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಸಹ ಶಿಕ್ಷಕ ಶಿವಪ್ಪಗುರ್ಕಿ, ಪತ್ರಕರ್ತರುಗಳಾದ ಎಂ.ಎಸ್.ಸುನಿಲ್ ಹಾಗೂ ಇಸ್ಮಾಯಿಲ್ ಕಂಡಕೆರೆ, ವಿದ್ಯಾರ್ಥಿನಿ ಶ್ರೀಶಾ ಮಾತನಾಡಿದರು. ಇದೇ ಸಂದರ್ಭ ಪತ್ರಕರ್ತರುಗಳಾದ ಎಂ.ಎಸ್.ಸುನಿಲ್ ಹಾಗೂ ಇಸ್ಮಾಹಿಲ್ ಕಂಡಕೆರೆ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.