ಸೋಮವಾರಪೇಟೆ ಡಿ.19 NEWS DESK : ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಎಂದು ಘೋಷಣೆ ಮಾಡಬಾರದು ಹಾಗೂ ರೈತರಿಗೆ ಭೂಮಿಯ ಹಕ್ಕುಪತ್ರವನ್ನು ನೀಡಬೇಕು ಎಂದು ಆಗ್ರಹಿಸಿ ಡಿ.20ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ರೈತರ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟಕ್ಕೆ ರೈತ ಸಂಘ, ಜಿಲ್ಲೆಯ 50ರಷ್ಟು ಸಂಘಸಂಸ್ಥೆಗಳು, ಗ್ರಾಮಾಭಿವೃದ್ಧಿ ಮಂಡಳಿಗಳು, ಎಲ್ಲಾ ರಾಜಕೀಯ ಪಕ್ಷಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ ಎಂದು ಅವರು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಇಬ್ಬರು ಶಾಸಕರುಗಳಾದ ಡಾ.ಮಂತರ್‌ಗೌಡ ಹಾಗೂ ಎ.ಎಸ್.ಪೊನ್ನಣ್ಣ, ಸಿ ಆ್ಯಂಡ್ ಡಿ ಭೂಮಿ ರೈತರಿಗೆ ಸಿಗಬೇಕು ಎಂದು ತಮ್ಮ ವಾದ ಮಂಡಿಸಿದ್ದಾರೆ. ಅವರಿಗೆ ಜಿಲ್ಲೆಯ ರೈತರು ಚಿರರುಣಿಗಳಾಗಿರುತ್ತೇವೆ. ಶಾಶ್ವತ ಪರಿಹಾರ ಸಿಗುವ ತನಕ, ರೈತರ ಹೋರಾಟಕ್ಕೆ ತಮ್ಮ ಸಹಕಾರ ನೀಡಬೇಕು ಎಂದು ಹೇಳಿದರು. ಸಿ ಆ್ಯಂಡ್ ಡಿ ಭೂಮಿಯೂ ಕೂಡ ಪೈಸಾರಿ ಜಾಗವಾಗಿದ್ದು, ಕೃಷಿಗೆ ಯೋಗ್ಯವಾದ ಭೂಮಿಯಾಗಿದೆ. ಪೈಸಾರಿ ಜಾಗವೆಂಬುದು ರೈತರಿಗೆ ಸೇರಿದ್ದು, ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಮಾಡಿದ ರೈತರಿಗೆ ಸರ್ಕಾರ ಅಕ್ರಮ-ಸಕ್ರಮದಲ್ಲಿ ಹಕ್ಕುಪತ್ರ ನೀಡುತ್ತಿದೆ. ಆದರೆ ಹಿಂದೆ ಕೆಲ ಕಂದಾಯ ಅಧಿಕಾರಿಗಳು ಸರ್ವೇ ಮಾಡದೆ, ಪೈಸಾರಿ ಜಾಗವನ್ನೇ ಸಿ ಆ್ಯಂಡ್ ಡಿ ಭೂಮಿ ಎಂದು ವರ್ಗೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದಾಖಲೆಯಲ್ಲಿ ಡೀಮ್ಡ್ ಫಾರೆಸ್ಟ್ ಎಂದು ನಮೂದಾಗಿದೆ. ಇನ್ನು ಮುಂದಾದರೂ ಸರ್ಕಾರಗಳು ರೈತಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಸಿ ಆ್ಯಂಡ್ ಡಿ ಭೂಮಿ ಹೋರಾಟ ರೈತರಿಗೆ ನ್ಯಾಯ ಸಿಗುವವರೆಗೂ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟವಲ್ಲ. ರೈತರು ಶಕ್ತಿ ಮತ್ತು ಸಂಕಷ್ಟಗಳನ್ನು ತೋರಿಸಲು ಪ್ರತಿಭಟನೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಹೋರಾಟ ನಡೆಯಲಿದೆ ಎಂದು ಹೇಳಿದರು. ಸಂಚಾಲಕ ಬಿ.ಜೆ.ದೀಪಕ್ ಮಾತನಾಡಿ, 10 ಗಂಟೆಗೆ ಸುಮಾರಿಗೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ರೈತರು ಸುದರ್ಶನ ಸರ್ಕಲ್‌ನಲ್ಲಿ ಸೇರಿಕೊಂಡು, ಅಲ್ಲಿಂದ ಗಾಂಧಿ ಮೈದಾನದ ವರೆಗೂ ಮೆರವಣಿಗೆ ನಡೆಯಲಿದೆ. ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಯಲಿದೆ. ರೈತರು ಶಾಂತಿಯುತವಾಗಿ ಧರಣಿ ನಡೆಸಲಿದ್ದಾರೆ ಎಂದು ಹೇಳಿದರು. ಸಂಚಾಲಕ ಕೆ.ಎಂ.ಲೋಕೇಶ್ ಕುಮಾರ್ ಮಾತನಾಡಿ, ರೈತರ ಹೋರಾಟ ರಾಜಕೀಯ ರಹಿತವಾಗಿದ್ದು, ಜಿಲ್ಲೆಯ ಹಾಲಿ, ಮಾಜಿ ಶಾಸಕರುಗಳು, ಸಂಸದರು ಗಾಂಧಿ ಮೈದಾನಕ್ಕೆ ಆಗಮಿಸಿ, ರೈತರಿಗೆ ಭರವಸೆ ನೀಡಬೇಕು ಎಂದು ಹೇಳಿದರು. ಸಂಚಾಲಕ ಎಸ್.ಬಿ. ಭರತ್ ಕುಮಾರ್ ಮಾತನಾಡಿ, ರೈತರು ಯಾವುದೇ ಮೀಸಲು ಅರಣ್ಯವನ್ನು ಒತ್ತುವರಿ ಮಾಡಿಲ್ಲ. ಸಿ ಆ್ಯಂಡ್ ಡಿ ಭೂಮಿಯಲ್ಲಿ ಮರಗಿಡಗಳನ್ನು ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿದ್ದಾರೆ. ಆಹಾರ ಬೆಳೆಗಳನ್ನು ಬೆಳೆದು, ಜನರ ಹಸಿವನ್ನು ನೀಗಿಸಿದ್ದಾರೆ. ವ್ಯವಸಾಯ ಮಾಡುವ ಭೂಮಿ ರೈತರ ಹಕ್ಕು. ಸರ್ಕಾರಗಳು ಕೂಡ ರೈತರ ಹಕ್ಕುಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ ಆಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ರೈತಪರ ಹೋರಾಟಗಾರ ಕೆ.ಎ.ಯಾಕೂಬ್ ಇದ್ದರು.