ಮಡಿಕೇರಿ ಡಿ.19 NEWS DESK : ಕೊಡಗಿನಲ್ಲಿ ಫುಟ್ಬಾಲ್ ವೇಗವಾಗಿ ಬೆಳೆಯುತ್ತಿದ್ದು, ಇನ್ನಷ್ಟು ಉನ್ನತ್ತಮಟ್ಟಕ್ಕೆ ಫುಟ್ಬಾಲ್ ಕ್ರೀಡೆ ಬೆಳವಣಿಗೆ ಸಾಧಿಸುವ ಅವಶ್ಯಕತೆ ಇದೆ. ಜಿಲ್ಲೆಯ ಎಲ್ಲಾ ಫುಟ್ಬಾಲ್ ಕ್ಲಬ್ ಗಳು ಫುಟ್ಬಾಲ್ ಕ್ರೀಡೆ ಬೆಳವಣಿಗೆಗೆ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯೊಂದಿಗೆ ಕೈ ಜೋಡಿಸಬೇಕೆಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಕರೆ ನೀಡಿದರು. ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಮ್ಮತ್ತಿಯಲ್ಲಿರುವ ಕಚೇರಿಯಲ್ಲಿ ನಡೆದ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ನೋಂದಾಯಿತ ಕ್ಲಬ್ ಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ನಡೆಯಲಿರುವ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ 2024-25ರ ಸಾಲಿನ ಜಿಲ್ಲಾಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯ ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕು. ತಳಮಟ್ಟದಿಂದಲೇ ಜಿಲ್ಲೆಯಲ್ಲಿ ಫುಟ್ಬಾಲ್ ಬೆಳೆಯಲು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹೊಸ ಯೋಜನೆಯನ್ನು ಕೈಗೊಳ್ಳಲು ತೀರ್ಮಾನಿಸಿದ್ದು, ಎಲ್ಲರ ಸಹಕಾರ ಅತ್ಯಗತ್ಯ ಎಂದು ಪಾಣತ್ತಲೆ ಜಗದೀಶ್ ಮಂದಪ್ಪ ಹೇಳಿದರು. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಪಿ.ಎ.ನಾಗೇಶ್ (ಈಶ್ವರ್) ಮಾತನಾಡಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಎಲ್ಲಾ ಕ್ಲಬ್ ಗಳು ಡಿ.21ರೊಳಗೆ ಕ್ಲಬ್ ಗಳ ನವೀಕರಣ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ನವೀಕರಣ ಶುಲ್ಕವನ್ನು ಪಾವತಿಸಲು ತಡಮಾಡಿದ ಕ್ಲಬ್ ಗಳಿಗೆ ಈ ಬಾರಿ ಲೀಗ್ ಪಂದ್ಯಾವಳಿಯ ಆಟಗಾರರ ಫಾರಮ್ ನೀಡುವುದಿಲ್ಲ. ಅದಲ್ಲದೇ ಫಾರಮ್ ಪಡೆಯುವ ಕ್ಲಬ್ ಗಳು ಜನವರಿ ತಿಂಗಳಲ್ಲಿ ತಮ್ಮ ಆಟಗಾರರು ಫಾರಮ್ ಕಡ್ಡಾಯವಾಗಿ ಜಿಲ್ಲಾ ಸಂಸ್ಥೆಗೆ ನೀಡಬೇಕು. ಸದ್ಯದಲ್ಲೇ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯ ದಿನಾಂಕವನ್ನು ಘೋಷಿಸಲಾಗುವುದೆಂದು ನಾಗೇಶ್ ಮಾಹಿತಿ ನೀಡಿದರು. ಕ್ಯಾಪ್ಟನ್ಸ್ 11 ಇಲೆವೆನ್ ಪಾಲಿಬೆಟ್ಟ ಹಾಗೂ ನಕ್ಷತ್ರ ಅಕಾಡೆಮಿ ಮುಖ್ಯಸ್ಥ ಹರೀಶ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಫುಟ್ಬಾಲ್ ಆಟಗಾರರಿಗೆ ಸೂಕ್ತ ವೇದಿಕೆ ನೀಡಬೇಕಾಗಿದೆ. ಕನಿಷ್ಠ ಒಬ್ಬ ಆಟಗಾರನು ವರ್ಷದಲ್ಲಿ 35 ಪಂದ್ಯವನ್ನು ಆಡಿದರೆ ಮಾತ್ರ ಆತನ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಧ್ಯ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಅಂಡರ್ 14 ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಆಸಕ್ತಿ ಹೊಂದಿದ್ದು, ಜಿಲ್ಲಾ ಫುಟ್ಬಾಲ್ ಸಂಸ್ಥೆ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಹರೀಶ್ ಮನವಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕ್ಲಬ್ ಗಳ ಪದಾಧಿಕಾರಿಗಳು ಲೀಗ್ ಪಂದ್ಯಾವಳಿಯ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಕ್ರಿಸ್ಟೋಫರ್ ಮಡಿಕೇರಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಖಜಾಂಜಿ ದೀಪು ಮಾಚಯ್ಯ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಸಂಘದ ಅಧ್ಯಕ್ಷ ಇಬ್ರಾಹಿಂ ಸುಂಟ್ಟಿಕೊಪ್ಪ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸದಸ್ಯರಾದ ಲಿಜೇಶ್ ಅಮ್ಮತ್ತಿ, ಮಹೇಂದ್ರ ಸುಂಟ್ಟಿಕೊಪ್ಪ, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ದರ್ಶನ್ ಸಕುಮಾರ್, ಇಸ್ಮಾಯಿಲ್ ಕಂಡಕರೆ ಇದ್ದರು. ಸಭೆಯಲ್ಲಿ ಕೊಡಗು ಜಿಲ್ಲೆಯ ನೋಂದಾಯಿತ 16ಕ್ಕೂ ಹೆಚ್ಚು ಫುಟ್ಬಾಲ್ ಕ್ಲಬ್ ಗಳು ಭಾಗವಹಿಸಿದ್ದರು.