




ನಾಪೋಕ್ಲು ಡಿ.19 NEWS DESK : ನೆಬ್ಬೂರು ಗೌಡ ಸಂಘದ ಹುತ್ತರಿ ಊರೋರ್ಮೆ ಸಂತೋಷಕೂಟವು ಕಟ್ರತನ ಬಾಣೆಯಲ್ಲಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು. ಪೊನ್ನಚ್ಚನ, ಕೊಟ್ಟಕೇರಿಯನ ಮತ್ತು ಕಟ್ರತನ ಕುಟುಂಬಗಳು ಒಟ್ಟುಗೂಡಿ ನಡೆಸಿಕೊಂಡು ಬರುತ್ತಿರುವ ಹುತ್ತರಿ ಊರೋರ್ಮೆ ಕೂಟದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಟ್ರತನ ಲೋಕನಾಥ್ ವಹಿಸಿ ಮಾತನಾಡಿ, ಸಂಘದ ಎಲ್ಲ ಸದಸ್ಯರ ಸಹಕಾರದಿಂದ ಮಾತ್ರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಕಟ್ರತನ ಪ್ರಸಾದ್ ಉದ್ಘಾಟಿಸಿದರು. ಮಡಿಕೇರಿ ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ ಪ್ರಸ್ತಾವಿಕ ಮಾತನಾಡಿದರು. ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಪೊನ್ನಚ್ಚನ ರೋಹಿತ್ ವಾಚಿಸಿದರು. ಕಟ್ರತನ ರೋಹಿಣಿ ಸ್ವಾಗತಿಸಿದರು. ಕೊಟ್ಟಕೇರಿಯನ ಧರ್ಮೇಂದ್ರ ನಿರೂಪಿಸಿದರು. ಪೊನ್ನಚ್ಚನ ಡೈಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವರದಿ : ದುಗ್ಗಳ ಸದಾನಂದ.