ಪೊನ್ನಂಪೇಟೆ ಡಿ.19 NEWS DESK : ಅನಿವಾಸಿ ಕೊಡಗಿನವರ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಕೆ.ಎಸ್.ಡಬ್ಲ್ಯೂ.ಎ.) ಯು.ಎ.ಇ. ರಾಷ್ಟ್ರೀಯ ಸಮಿತಿ ವತಿಯಿಂದ ಕೊಡವ ಮುಸ್ಲಿಂ ಅಸೋಸಿಯೇಷನ್ ನ (ಕೆ.ಎಂ.ಎ.) ಸ್ಥಾಪಕಾಧ್ಯಕ್ಷ ಮತ್ತು ಕಿತ್ತಳೆನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕ ಕುವೇಂಡ ವೈ. ಹಂಝತುಲ್ಲಾ ಅವರನ್ನು ದುಬೈನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಂಝತುಲ್ಲಾ ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚಿಗೆ 2022ನೇ ಸಾಲಿನ ಗೌರವ ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೆ.ಎಸ್.ಡಬ್ಲ್ಯೂ.ಎ. (ಯುಎಇ) ವತಿಯಿಂದ ದುಬೈನಲ್ಲಿ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್.ಡಬ್ಲ್ಯೂ.ಎ. ಜಿಸಿಸಿ ಅಧ್ಯಕ್ಷ ಕೊಟ್ಟಮುಡಿಯ ಹೆಚ್.ಎ.ಅಬೂಬಕ್ಕರ್ ಹಾಜಿ, ಕಳೆದ ನಾಲ್ಕು ದಶಕಗಳಿಂದ ಪತ್ರಿಕೋದ್ಯಮ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಂಝತುಲ್ಲಾ ಅವರು ಸಲ್ಲಿಸಿರುವ ಸೇವೆ ಶ್ಲಾಘನೀಯವಾದದ್ದು. ಕನ್ನಡ ನೆಲದ ಪರಿಕಲ್ಪನೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆ ಎರಡರಲ್ಲಿಯೂ ಇವರು ಅನನ್ಯವಾದ ಕೊಡುಗೆಯನ್ನು ನೀಡುವ ಮೂಲಕ ಕನ್ನಡ ಸಾಹಿತ್ಯದ ಸತ್ವವನ್ನು ಹೆಚ್ಚಿಸಲು ಶ್ರಮಿಸಿದ್ದಾರೆ. ತಮ್ಮ ತಾಯ್ನಾಡಾದ ಕೊಡಗಿನ ಮೇಲಿರುವ ಪ್ರೀತಿಯ ಪ್ರತೀಕವಾಗಿ ಕಿತ್ತಳೆ ನಾಡು ಎಂಬ ಹೆಸರಿನ ಕನ್ನಡ ವಾರಪತ್ರಿಕೆಯನ್ನು ಬೆಂಗಳೂರಿನಿಂದ ಹೊರ ತರುತ್ತಿರುವುದು ಇವರ ಭಾಷಾ ಪ್ರೇಮಕ್ಕೆ ಸಾಕ್ಷಿಯಾಗಿದೆ. ತಮ್ಮ ತರುಣ ಪ್ರಾಯದಿಂದಲೇ ಸಮಾಜಮುಖಿ ಚಿಂತಕರಾಗಿ ದೂರದೃಷ್ಟಿತ್ವದಿಂದ ಇವರು ಮಾಡಿದ ಸಮುದಾಯ ಸೇವೆ ಇಂದಿನ ಯುವ ಸಮೂಹಕ್ಕೆ ಸ್ಪೂರ್ತಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕುವೇಂಡ ವೈ. ಹಂಝತುಲ್ಲಾ, ಬೇರೆ ಬೇರೆ ಹಿನ್ನೆಲೆಗಳಲ್ಲಿ ದುಬೈಗೆ ಬಂದ ಕೊಡಗಿನವರು ತಮ್ಮ ತಾಯ್ನಾಡಿನ ಭಾಷೆ ಮತ್ತು ಸಾಂಸ್ಕೃತಿಕ ತುಡಿತಗಳಿಂದ ತಾವಿರುವ ನೆಲೆಗಳಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಅದನ್ನು ಕನ್ನಡಿೀಕರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕನ್ನಡ ಭಾಷಾ ಬೆಳವಣಿಗೆಯ ಪರಿಕಲ್ಪನೆಯಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ನ(ಯುಎಇ) ಕನ್ನಡದ ಕಾರ್ಯ ಚಟುವಟಿಕೆಗಳು ಇತರರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು. ಮುಂದಿನ ಪೀಳಿಗೆಯವರಿಗೆ ಕನ್ನಡ ಅಪ್ರಸ್ತುತವಾಗುವ ಆತಂಕದ ನಡುವೆ ಈ ರೀತಿಯ ಬೆಳವಣಿಗೆಗಳು ಆಶಾವಾದವನ್ನು ಮೂಡಿಸುತ್ತದೆ ಎಂದರಲ್ಲದೆ, ವಿದೇಶದಲ್ಲಿ ನೆಲೆಸಿರುವವರು ಭಾರತದೊಂದಿಗೆ ಬಲವಾದ ಮತ್ತು ಆಳವಾದ ಕೌಟುಂಬಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿದರೆ ಮಾತ್ರ ನಮ್ಮತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಒತ್ತಿ ಹೇಳಿದರು. ಸಾಕಷ್ಟು ಸಂಖ್ಯೆಯಲ್ಲಿ ಯುಎಇ ನಲ್ಲಿ ನೆನಸಿರುವ ಕನ್ನಡಿಗರು ಭಾರತದ ಆರ್ಥಿಕತೆಗೆ ನೀಡಿದ ಸಹಕಾರ ಗಮನಾರ್ಹವಾಗಿದೆ. ಈ ಎರಡೂ ದೇಶಗಳು ಪ್ರಪಂಚದ ಆರ್ಥಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಇದೂ ಕೂಡ ಪ್ರಮುಖ ಕಾರಣ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಅನಿವಾಸಿ ಕನ್ನಡಿಗರ ಕೊಡುಗೆ ಅಪಾರವಾದುದು ಎಂದು ಅಭಿಪ್ರಾಯಪಟ್ಟ ಹಂಝತುಲ್ಲಾ, ದುಡಿದು ಸಂಪಾದಿಸಿದ ಹಣದಲ್ಲಿ ಒಂದು ಪಾಲನ್ನು ತಾಯ್ನಾಡಿನ ಬಡ ಜನತೆಗಾಗಿ ವಿವಿಧ ಯೋಜನೆಗಳ ಮೂಲಕ ವಿನಿಯೋಗಿಸುತ್ತಿರುವ ಕೆ.ಎಸ್.ಡಬ್ಲ್ಯೂ.ಎ.(ಯುಎಇ) ಸಂಘಟನೆಯ ಸಾಮಾಜಿಕ ಸೇವೆ ಇಡೀ ಕೊಡಗು ಜಿಲ್ಲೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ವಕ್ತಾರರಾದ ಇಸ್ಮಾಯಿಲ್ ಮೂರ್ನಾಡು, ಸಮುದಾಯದ ಅಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ಹಂಝತುಲ್ಲಾರಿಗೆ ಸಲ್ಲಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆ.ಎಸ್.ಡಬ್ಲ್ಯೂ.ಎ. ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಹಮದ್ ಚಾಮಿಯಾಲ ಮಾತನಾಡಿದರು. ಉಪಾಧ್ಯಕ್ಷರಾದ ರಫೀಕ್ ಹಾಜಿ ಚಾಮಿಯಾಲ, ಅಶ್ರಫ್ ಕುಂಜಿಲ, ಕಾರ್ಯದರ್ಶಿ ನಿಜಾರ್ ಗುಂಡಿಕೆರೆ, ಸಲಹಾ ಸಮಿತಿ ಸದಸ್ಯರಾದ ಹಮೀದ್ ನಾಪೋಕ್ಲು ಸೇರಿದಂತೆ ಸಂಘಟನೆಯ ಬೇರೆ ಬೇರೆ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಝುಬೈರ್ ಎಮ್ಮೆಮಾಡು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.