ಮಡಿಕೇರಿ ಡಿ.19 NEWS DESK : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಪಕ್ಷದ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಂಬೇಡ್ಕರ್ ಅವರ ಹೆಸರನ್ನು ಪದೇಪದೇ ಹೇಳುವುದು ಪ್ಯಾಶನ್ ಆಗಿದೆ. ಅಂಬೇಡ್ಕರ್ ಹೆಸರನ್ನು ಹೇಳಿದಷ್ಟು ಬಾರಿ ದೇವರ ಸ್ಮರಣೆ ಮಾಡಿದರೆ ಏಳು ಜನ್ಮಗಳಿಗೆ ಸ್ವರ್ಗ ದೊರಕುತ್ತಿತ್ತು ಎಂದು ಸಚಿವ ಅಮಿತ್ ಶಾ ಅವರು ಸದನದಲ್ಲಿ ಹೇಳಿಕೆ ನೀಡಿರುವುದು ಖಂಡನೀಯ. ಅಂಬೇಡ್ಕರ್ ಅವರ ಅವಹೇಳನ ದೇಶದ ಸಂವಿಧಾನವನ್ನೇ ಅವಹೇಳನ ಮಾಡಿದ್ದಕ್ಕೆ ಸಮ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶತಮಾನಗಳಿಂದ ಅವಮಾನ, ಶೋಷಣೆ, ದೌರ್ಜನ್ಯಕ್ಕೆ ಒಳಗಾಗಿದ್ದ ಜನರಿಗೆ ಸಂವಿಧಾನದ ಮೂಲಕ ರಕ್ಷಣೆ ನೀಡಿದ ದೇಶದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಪುನರುಚ್ಚರಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.