ಸಿದ್ದಾಪುರ ಡಿ.21 NEWS DESK : ಸಂತ ಅನ್ನಮ್ಮ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಪೋಷಕರ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಯಿತು. ಪರಿಸರ ಸಂರಕ್ಷಣೆ, ದೇಶಪ್ರೇಮ, ತಂದೆ ತಾಯಿಗಳ ಪ್ರೀತಿ ವಾತ್ಸಲ್ಯ, ಗುರು ಹಿರಿಯರಿಗೆ ಗೌರವ ಸಮರ್ಪಣೆ ಸೇರಿದಂತೆ ಕಿರು ನಾಟಕ ಹಾಗೂ ಹಾಡು, ಸಂಗೀತ ನೃತ್ಯದ ಮೂಲಕ ಹಲವು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು. ಮಡಿಕೇರಿ ತಾಲ್ಲೂಕು ಶಿಕ್ಷಣಾಧಿಕಾರಿ ಡಾ. ಬಿ.ಸಿ.ದೊಡ್ಡೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಖ್ಯ. ಪೋಷಕರು ತಮ್ಮ ಮಕ್ಕಳಿಗೆ ಪ್ರೀತಿ ವಾತ್ಸಲ್ಯದಿಂದ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದಲ್ಲಿ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು. ಅತಿಯಾದ ಟಿವಿ, ಮೊಬೈಲ್ ಬಳಕೆಯಿಂದ ಪೋಷಕರು ಹಾಗೂ ಮಕ್ಕಳಲ್ಲಿ ಪ್ರೀತಿ ವಾತ್ಸಲ್ಯಗಳು ದೂರವಾಗಿ ಸಹಬಾಳ್ವೆಯ ನೆಮ್ಮದಿಯ ವಾತಾವರಣ ಇಲ್ಲದಂತಾಗುತ್ತದೆ. ಮಕ್ಕಳ ಶೈಕ್ಷಣಿಕ ಬಲ ವರ್ಧನೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪೋಷಕರು ಸಹಕಾರ ನೀಡಬೇಕಾಗಿದೆ ಎಂದರು. ಸಂತ ಅನ್ನಮ್ಮ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಗುರು ಹಿರಿಯರು, ತಂದೆ ತಾಯಿಗಳಿಗೆ ಗೌರವ ಸಮರ್ಪಣೆ ಸಲ್ಲಿಸುವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರು ತೆರೇಸಿಯನ್ ಕಾಲೇಜಿನ ನಿರ್ದೇಶಕಿ ಡಾ.ಸಿಸ್ಟರ್ ಜ್ವುನಿಟ ಮಾತನಾಡಿ ಗುರು ಹಿರಿಯರು, ಪೋಷಕರು ಮಕ್ಕಳೊಂದಿಗೆ ಪ್ರೀತಿ ವಾತ್ಸಲ್ಯ ತೋರಿದಲ್ಲಿ ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು ಕಲಿಕೆ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಿ ಪ್ರೋತ್ಸಾಹ ನೀಡಿದ್ದಲ್ಲಿ ಭವಿಷ್ಯದ ಪ್ರತಿಭಾನ್ವಿತರಾಗಿ ಮುಂದೆ ಬರಲು ಸಾಧ್ಯವಾಗಲಿದೆ ಎಂದರು. ವಿರಾಜಪೇಟೆ ತಾಲ್ಲೂಕು ಮಧ್ಯಾಹ್ನದ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಕೆ.ಆರ್.ರಾಜೇಶ್ ಮಾತನಾಡಿ ಸಂತ ಅನ್ನಮ್ಮ ಶಾಲೆಯಲ್ಲಿ ಪೋಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಪೋಷಕರ ಹಾಗೂ ಮಕ್ಕಳ ನಡುವೆ ಉತ್ತಮ ಬಾಂಧವ್ಯ ಮತ್ತು ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಾರ್ಯಕ್ರಮ ಮಾದರಿಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಸಂತ ಅನ್ನಮ್ಮ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಪ್ರಣಿತ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 156 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದು, ಆರೋಗ್ಯ, ಪರಿಸರ, ಶುಚಿತ್ವ, ಗೌರವ, ಕ್ರೀಡೆ ಸೇರಿದಂತೆ ಮಕ್ಕಳ ಪ್ರತಿಭೆಗೆ ಪೂರಕವಾದ ಶಿಕ್ಷಣ ನೀಡಲಾಗುತ್ತಿದೆ ಎಂದರು. ಸಂತ ಅನ್ನಮ್ಮ ಕನ್ನಡ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅರ್ಪಿತ ಮಾತನಾಡಿ, ಶೈಕ್ಷಣಿಕ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಶಿಕ್ಷಣದ ಮೂಲಕ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ಹೆಚ್ಚಿನ ಪ್ರೋತ್ಸಾಹ ನೀಡಿದಲ್ಲಿ ಪ್ರತಿಭಾನ್ವಿತರಾಗಿ ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ ಎಂದು ಹೇಳಿದರು. ಈ ಸಂದರ್ಭ ಮಾಜಿ ಗ್ರಾ.ಪಂ ಅಧ್ಯಕ್ಷ ರೀನಾ ತುಳಸಿ, ಸೇಂಟ್ ಮೇರಿಸ್ ಚರ್ಚ್ ಫಾದರ್ ಜೋಜಿ, ಪಾಲಿಬೆಟ್ಟ ಶಾಲೆಯ ಸಿಸ್ಟರ್ ಐರಿಶ್, ಆಶಾಲತ, ಸೋಮವಾರಪೇಟೆ ಓಎಲ್‌ವಿ ಕಾನ್ವೆಂಟ್ ನ ಸಿಸ್ಟರ್ ಸಿಂತಿಯ, ರಕ್ಷಿತಾ ಕುಶಾಲನಗರ ಫಾತಿಮ ಶಾಲೆಯ ಸಿಸ್ಟರ್ ಸ್ಪಂದನ, ತೆರೇಸಾ ಆ್ಯನ್, ಸಿದ್ದಾಪುರ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಾಬು ನಾಯಕ, ಬಿಜಿಎಸ್ ಶಾಲೆಯ ಅನಸ್ವರ, ಮಲೆಯಾಳಂ ಶಾಲೆಯ ಪ್ರೇಮ, ಕೃಷ್ಣ, ಗಣೇಶ್, ಅಂಬೇಡ್ಕರ್ ಸೇನೆಯ ಜಿಲ್ಲಾ ಅಧ್ಯಕ್ಷ ಸತೀಶ್, ಕಲಾವಿಧ ಭಾವ ಮಾಲ್ದಾರೆ ಉಪಸ್ಥಿತರಿದ್ದರು. ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅರ್ಪಿತ ಸ್ವಾಗತಿಸಿ, ಸಹ ಶಿಕ್ಷಕಿ ಸುಜಾತ ನಿರೂಪಣೆ ಮಾಡಿ ವಂದಿಸಿದರು. ಈ ಸಂದರ್ಭ ಸಂತ ಅನ್ನಮ್ಮ ಶಾಲೆಯ ಶಿಕ್ಷಕರು, ಮಕ್ಕಳು, ಮತ್ತು ಪೋಷಕರು ಹಾಜರಿದ್ದರು.