ನಾಪೋಕ್ಲು ಡಿ.21 NEWS DESK : ಯಾವುದೇ ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಮಡಿವಂತಿಕೆ ಬಿಟ್ಟು ಸರ್ವರೊಳಗೆ ಒಂದಾಗಿ ಬೆರೆಯಬೇಕು ಎಂದು ಉಪನ್ಯಾಸಕ ಹಾಗೂ ಮೈಸೂರು ಗೌಡ ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿ ಹಾಗೂ ಮೈಸೂರಿನ ವಿವಿಧ ಗೌಡ ಸಂಘಟನೆಗಳ ಆಶ್ರಯದಲ್ಲಿ ನಡೆದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಭೆ ಸಮಾರಂಭ ಅಲ್ಲದೆ ಇತರರೊಂದಿಗೆ ತಮ್ಮ ಭಾಷೆಯಲ್ಲೇ ವ್ಯವಹರಿಸಿದರೆ ಭಾಷೆ ಮತ್ತು ಸಂಸ್ಕೃತಿ ಉಳಿಯುತ್ತದೆ. ಮಡಿವಂತಿಕೆ ತೋರಿದ ಯಾವುದೇ ಸಂಸ್ಕೃತಿಯಾಗಲಿ, ಭಾಷೆಯಾಗಲಿ, ಜನಾಂಗವಾಗಲಿ ಜಗತ್ತಿನಲ್ಲಿ ಉಳಿಯಲು ಸಾಧ್ಯವಾಗಿಲ್ಲ, ಇಡೀ ಜಗತ್ತನ್ನು ಒಂದು ಕಾಲದಲ್ಲಿ ಆಳಿದ ಇಂಗ್ಲೀಷರು ತಮ್ಮ ಭಾಷೆಯನ್ನು ಜಗತ್ತಿನಲ್ಲಿ ಹಂಚಿದ ಪರಿಣಾಮ ಅವರು ಹೋದ ಮೇಲೂ ಅವರ ಭಾಷೆ ಎಲ್ಲರನ್ನೂ ಆಳುತ್ತಿದೆ, ಆದುದರಿಂದ ಭಾಷೆ ಯಾವುದೇ ಜನಾಂಗಕ್ಕೆ ಸೀಮಿತವಾಗದೆ ಎಲ್ಲರೊಳಗೊಂದಾಗಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ, ಜನಾಂಗ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾದರೆ ಭಾಷೆಗೆ ಉಳಿಗಾಲ ಇರುವುದಿಲ್ಲ, ಭಾಷೆ ನಾಶವಾದರೆ ಜನಾಂಗವೇ ನಾಶವಾದಂತೆ. ಆದುದರಿಂದ ಎಲ್ಲಾ ಕಡೆ ಮಾತೃ ಭಾಷೆ ಬಳಸುವಂತೆ ಸಲಹೆ ನೀಡಿದರು. ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಗೌಡ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ, ಮಹಿಳಾ ಸಂಘದ ಅಧ್ಯಕ್ಷೆ ನಡುವಟ್ಟಿರ ಗೀತ ಲಕ್ಷ್ಮಣ, ಹೂಟ್ಕಲ್ಲಿ ಗೌಡ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪೊನ್ನಚ್ಚನ ಅಪ್ಪಯ್ಯ ಉಪಸ್ಥಿತರಿದ್ದರು. ಅರೆಭಾಷೆ ದಿನಾಚರಣೆ ಪ್ರಯುಕ್ತ ಅರೆಭಾಷೆಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಗೌಡ ಸಮಾಜದ ಸಹ ಕಾರ್ಯದರ್ಶಿ ನಡುಮನೆ ಚಂಗಪ್ಪ ಸ್ವಾಗತಿಸಿದರೆ, ನಿರ್ದೇಶಕರಾದ ಕುಂಟುಪುನಿ ಶೀಲಾ ನಿರೂಪಿಸಿ, ಚಪ್ಪೇರ ಯಮುನಾ ವಂದಿಸಿದರು.
ವರದಿ : ದುಗ್ಗಳ ಸದಾನಂದ