ನಾಪೋಕ್ಲು ಡಿ.21 NEWS DESK : ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ವಾರ್ಷಿಕ ಉತ್ಸವವು ಎರಡು ಪ್ರಮುಖ ಕೋಲಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಶ್ರೀ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಮುಂಜಾನೆಯಿಂದಲೇ ವಿವಿಧ ಕೋಲಗಳು, ಶಾಸ್ತಾವು ದೇವರಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು. ಬೆಳಿಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ನಡೆಯಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿದರು. ಈ ಸಂದರ್ಭ ಭಕ್ತರಿಂದ ದೇವರಿಗೆ ವಿವಿಧ ರೀತಿಯ ಹರಕೆಗಳನ್ನು ಸಲ್ಲಿಸಲಾಯಿತು. ದೇವಾಲಯದ ವತಿಯಿಂದ ಉತ್ಸವ ವೀಕ್ಷಿಸಲು ಬಂದ ಭಕ್ತರಿಗೆ ಅನ್ನದಾನ ನಡೆಯಿತು. ಅಪರಾಹ್ನ ಜರುಗಿದ ವಿಷ್ಣುಮೂರ್ತಿ ಕೋಲದ ಮೇಲೇರಿಯನ್ನು ಭಕ್ತರು ವೀಕ್ಷಿಸಿದರು. ಬೆಳ್ಳಿಯ ಮುಖವಾಡ ಧರಿಸಿ ವಿಷ್ಣುಮೂರ್ತಿ ಕೋಲ ದೇವಾಲಯದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಬರುವುದರೊಂದಿಗೆ ಉತ್ಸವಕ್ಕೆ ತೆರೆ ಬಿತ್ತು. ಉತ್ಸವದ ಅಂಗವಾಗಿ ಭಕ್ತರು ಹರಕೆಯ ಮಣ್ಣಿನ ನಾಯಿಯನ್ನು ಒಪ್ಪಿಸಿದರು. ಉತ್ಸವದ ಮುನ್ನ ಕೊಟ್ಟಿ ಹಾಡುವುದು, ದೀಪಾರಾಧನೆ (ಅಂದಿಬೊಳಕ್)ನೆರವೇರಿತು. ಕೇರಳದ ಚಂಡೆಯೊಂದಿಗೆ ತಿರುವಾಳ ನೃತ್ಯ ಗಮನ ಸೆಳೆಯಿತು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ವರದಿ : ದುಗ್ಗಳ ಸದಾನಂದ.