ಕುಶಾಲನಗರ ಡಿ.25 NEWS DESK : ಕುಶಾಲನಗರ ಪಟ್ಟಣದಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಕುಶಾಲನಗರದ ಹೃದಯ ಭಾಗದಲ್ಲಿರುವ ಸಂತ ಸೆಬಾಸ್ಟಿಯನ್ನರ ದೇವಾಲಯದಲ್ಲಿ ಧರ್ಮಗುರು ವಂ.ಫಾ.ಎಂ. ಮಾರ್ಟಿನ್ ಹಾಗೂ ತಪೋವನ ಗುರು ಮಠದ ವಂ.ಫಾ. ವಿಲ್ ಫ್ರೆಡ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ವಂ.ಫಾ. ವಿಲ್ ಫ್ರೆಡ್ ಏಸುವಿನ ಸಂದೇಶವನ್ನು ಸಾರಿದರು. ಸಂತ ಸೆಬಾಸ್ಟಿಯನ್ ದೇವಾಲಯದ ಯುವಕ ಸಂಘದಿಂದ ಯೇಸುವಿನ ಗೋದಲಿಯನ್ನು ವಿಭಿನ್ನವಾಗಿ ನಿರ್ಮಿಸಿದ್ದರು, ಈ ಸಂದರ್ಭದಲ್ಲಿ ದೇವಾಲಯದ ಸಲಹಾ ಸಮಿತಿ, ಮರಣ ನಿಧಿ ಸಮಿತಿ, ಯುವಕ ಸಂಘ ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿ, ಮೊಂಬತ್ತಿ ಬೆಳಗಿ, ಸಿಹಿ ಹಂಚಿ ಸಂಭ್ರಮಿಸಿದರು. ಕ್ರಿಸ್ ಮಸ್ ಮರಕ್ಕೆ ಅಲಂಕಾರ, ಮನೆಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿದ್ದರು. ಕ್ರೈಸ್ತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಗೋದಲಿ ನಿರ್ಮಿಸಿ, ಅದರಲ್ಲಿ ಬಾಲ ಏಸುವಿನ ಹಾಗೂ ಮಾತೆ ಮೇರಿಯ ಪ್ರತಿಕೃತಿಯನ್ನಿರಿಸಿ ಪೂಜಿಸಲಾಯಿತು.