ಮಡಿಕೇರಿ ಡಿ.28 NEWS DESK : ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು ಹಾರಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ವಿರಾಜಪೇಟೆಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಣಿಎರವರ ಪೊನ್ನು (21) ಎಂಬುವವರೇ ಮೃತ ಕಾರ್ಮಿಕ. ಗುಂಡು ಹೊಡೆದ ಆರೋಪದಡಿ ವಿರಾಜಪೇಟೆಯ ಬ್ಯಾಂಕ್ ವೊಂದರ ಭದ್ರತಾ ಸಿಬ್ಬಂದಿ ಪೊರ್ಕಂಡ ಚಿಣ್ಣಪ್ಪ ಎಂಬಾತನನ್ನು ಬಂಧಿಸಲಾಗಿದೆ.
ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲಿಸರು ಆರೋಪಿಯ ಬಳಿಯಿಂದ ಕೃತ್ಯಕ್ಕೆ ಬಳಸಿದ್ದ ಕೋವಿಯನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಮಿಕ ದಂಪತಿ ಪಣಿಎರವರ ಪೊನ್ನು ಹಾಗೂ ಗೀತಾ ಕೆಲವು ತಿಂಗಳ ಹಿಂದೆ ಚೆಂಬೆಬೆಳ್ಳೂರು ಗ್ರಾಮದ ತೋಟದ ಮಾಲೀಕರೊಬ್ಬರ ಲೈನ್ ಮನೆಗೆ ಬಂದು ನೆಲೆಸಿದ್ದರು. ಡಿ.27 ರಂದು ಸಂಜೆ ಕಾರ್ಮಿಕ ದಂಪತಿ ಪಕ್ಕದಲ್ಲೇ ಇದ್ದ ಆರೋಪಿ ಚಿಣ್ಣಪ್ಪ ಅವರ ತೋಟದ ಅಂಚಿನಲ್ಲಿದ್ದ ಹಲಸಿನ ಮರದ ಬಳಿಗೆ ತೆರಳಿದ್ದರು. ಈ ಸಂದರ್ಭ ಪೊನ್ನು ಹಲಸಿನ ಮಿಡಿ ಕೊಯ್ಯಲು ಮರವೇರಿದ್ದರು. ಇದೇ ಸಂದರ್ಭ ಸ್ಥಳಕ್ಕೆ ಬಂದ ಚಿಣ್ಣಪ್ಪ, ಹಲಸಿನ ಮರವೇರಿದ ಪೊನ್ನವನ್ನು ನಿಂದಿಸಿ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡು ಕೆಳಗೆ ಬಿದ್ದ ಪೊನ್ನುವನ್ನು ತೋಟದ ಮಾಲೀಕರ ನೆರವಿನಿಂದ ಪತ್ನಿ ಗೀತಾ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಿದರಾದರು, ಅಷ್ಟರಲ್ಲೆ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.