ಮಡಿಕೇರಿ ಡಿ.30 NEWS DESK : ಮಡಿಕೇರಿ ಕೊಡವ ಸಮಾಜದ ಪುತ್ತರಿ ನಮ್ಮೆರ ಊರೊರ್ಮೆ ಸಮಾರಂಭವು ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾಜದ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆಯ ಮೆನೆಜಿಂಗ್ ಡೈರೆಕ್ಟರ್ ಪೆಮ್ಮಂಡ ಎ.ಮಂದಣ್ಣ, ಕೊಡಗಿನ ಪುತ್ತರಿ ಹಾಗೂ ಕೈಲ್ ಪೊಳ್ದ್ ಹಬ್ಬದ ಆಚರಣೆಯ ಹಿಂದೆ ಸಾಂಪ್ರದಾಯಿಕ ಭತ್ತದ ಕೃಷಿ ಮರೆಯಾಗುತ್ತಿರುವುದು ವಿಷಾದನೀಯ. ಭತ್ತದ ಕೃಷಿ ಇಲ್ಲದೆ ಹಬ್ಬ ಆಚರಣೆ ಅರ್ಥಹೀನವಾಗುವುದರಿಂದ ಸಂಘ ಸಂಸ್ಥೆಗಳು, ಸಮಾಜಗಳು ಭತ್ತದ ಕೃಷಿಗೆ ಹೆಚ್ಚಿನ ಒತ್ತು ನೀಡುವಂತಾಗಬೇಕೆಂದರು. ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಒಗ್ಗಟ್ಟು ಇದ್ದರೆ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ. ಮರಗೋಡುವಿನ ಕಟ್ಟೆಮಾಡುವಿನ ಮಹಾಮೃತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಕೊಡವರ ಉಡುಪನ್ನು ಅವಮಾನಿಸಿರುವುದು ಖಂಡನೀಯ. ಎಲ್ಲರ ಸಹಕಾರದಿಂದ ಮಡಿಕೇರಿ ಕೊಡವ ಸಮಾಜ ಅಭಿವೃದ್ಧಿಯ ಜೊತೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಬರುತ್ತಿದೆ ಎಂದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೇವರ ನೆಲೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳಿಗೆ ಸಮಾಜದ ವತಿಯಿಂದ ಕೊಡವ ಒಡಿಕತ್ತಿ ನೀಡಿ ಗೌರವಿಸ ಲಾಯಿತು. ಹೆಚ್ಚು ಅಂಕಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು. ಫೆಡರೇಶನ್ ಆಫ್ ಕೊಡವ ಸಮಾಜ ಬಾಳುಗೋಡ್ ನಲ್ಲಿ ಆಯೋಜಿಸಿರುವ ಕೊಡವ ಮೇಳದಲ್ಲಿ ಸಮಾಜದಿಂದ ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ವಿಜೇತರದವರನ್ನು ಗೌರವಿಸಲಾಯಿತು. ಸಮಾಜದ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕಾರದ ಕನ್ನಂಡ ಕವಿತಾ ಬೊಳ್ಳಪ್ಪ, ನಂದಿನೆರವಂಡ ರವಿಬಸಪ್ಪ, ಕಾಳಚಂಡ ಅಪ್ಪಣ್ಣ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಮೂವೇರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ಕಾಂಡೆರ ಲಲ್ಲು ಕುಟ್ಟಪ್ಪ, ಸಮಾಜದ ಸದಸ್ಯರು,ಮಡಿಕೇರಿಯ ಕೊಡವ ಕೇರಿಯವರು, ಪೊಮ್ಮಕ್ಕಡ ಕೂಟದ ಸದಸ್ಯರು ಹಾಜರಿದ್ದರು. ನಿರ್ದೇಶಕರಾದ ಮಂಡಿರ ಸದಾ ಮುದ್ದಪ್ಪ ಅತಿಥಿಗಳ ಪರಿಚಯಮಾಡಿದರು. ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿದರು, ಉಪಾಧ್ಯಕ್ಷ ಕೇಕಡ ವಿಜುದೇವಯ್ಯ ಸ್ವಾಗತಿಸಿದರು.ಜಂಟಿಕಾರ್ಯದರ್ಶಿ ನಂದಿನೆರವಂಡ ದಿನೇಶ್ ವಂದಿಸಿದರು. ನಂತರ ತಳಿಯಕ್ಕಿ ದೀಪದೊಂದಿಗೆ ಕಾವೇರಿ ಕೇರಿಯವರು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಪುರಾತನ ಪುತ್ತರಿ ಕೋಲ್ ಮಂದ್ ಸ್ವಾಗತಿಸಿದರು. ನಂತರ ಕೋಲಾಟ್, ಬೊಳಕಾಟ್ ಹಾಗೂ ಮಹಿಳೆಯರ ಉಮ್ಮತಾಟ್ ವಾಲಗತಾಟ್ ಪ್ರದರ್ಶನ ನೆರವೇರಿತು.
ವರದಿ: ಪುತ್ತರಿರ ಕರುಣ್ ಕಾಳಯ್ಯ