ಮಡಿಕೇರಿ NEWS DESK ಜ.1 : ಎಲ್ಲಾ ಜಾತಿ ಜನಾಂಗಗಳು ಸರ್ವ ಸಮಾನತೆಯಿಂದ ದೇವತಾ ಕಾರ್ಯಗಳಲ್ಲಿ ಒಂದಾಗಿ ಬೆರೆಯಬೇಕೆನ್ನುವ ಚಿಂತನೆಗಳಡಿ ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದಲ್ಲಿ ಯಾವುದೇ ಜನಾಂಗದ ಸಾಂಪ್ರದಾಯಿಕ ಆಚರಣೆಗಳು ಬೇಡವೆನ್ನುವ ನಿಯಮವನ್ನು ಮಾಡಿಕೊಳ್ಳಲಾಗಿದೆ. ಇದನ್ನು ಜಿಲ್ಲಾಡಳಿತ ಗೌರವಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಗ್ರಾಮಸ್ಥರು ಹಾಗೂ ದೇವಸ್ಥಾನದ ಸ್ವಯಂ ಸೇವಕ ಕಟ್ಟೆಮನೆ ಸೋನಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟೆಮಾಡು ಗ್ರಾಮ ವ್ಯಾಪ್ತಿಯಲ್ಲಿ ಅಂದಾಜು ಶೇ.30 ರಷ್ಟು ಗೌಡರು, ಶೇ.15 ರಿಂದ 20 ರಷ್ಟು ಕೊಡವ ಸಮೂಹ ಬಾಂಧವರಿದ್ದಾರೆ. ಶೇ.50 ರಷ್ಟು ಮಂದಿ ವಿವಿಧ ಜನಾಂಗಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರು ದೇವಸ್ಥಾನದಲ್ಲಿ ಸರ್ವ ಸಮಾನವಾಗಿ ತೊಡಗಿಸಿಕೊಳ್ಳಬೇಕೆನ್ನುವ ಚಿಂತನೆಯಿoದ, ದೇವಸ್ಥಾನದಲ್ಲಿ ಯಾವುದೇ ಸಮೂಹದ ಸಾಂಪ್ರದಾಯಿಕ ಉಡುಪು, ಆಚರಣೆೆಗಳು ಬೇಡವೆನ್ನುವ ನಿಯಮವನ್ನು ಗ್ರಾಮಸ್ಥರೆಲ್ಲರ ಸಮ್ಮತಿಯೊಂದಿಗೆ ರಚಿಸಲಾಗಿದೆ. ಅದರಂತೆ ಕಳೆದ ಒಂದು ವರ್ಷದಿಂದ ಗ್ರಾಮದ ಎಲ್ಲಾ ಸಮೂಹದವರು ನಡೆದುಕೊಂಡು ಬಂದಿರುವುದಾಗಿ ಸ್ಪಷ್ಟಪಡಿಸಿದರು. ಕಟ್ಟೆಮಾಡು ಗ್ರಾಮದ ವಿವಿಧ ಜನಾಂಗಗಳ ಹಾಗೂ ಕುಟುಂಬಗಳ ಪ್ರತಿನಿಧಿಗಳಿಗೆ ಕಟ್ಟೆಮಾಡು ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಅವಕಾಶವನ್ನು ನೀಡಲಾಗಿದೆ. ಕೊಡವ, ಗೌಡ ಜನಾಂಗವನ್ನು ಒಳಗೊಂಡAತೆ ಹತ್ತಕ್ಕೂ ಹೆಚ್ಚಿನ ವಿವಿಧ ಜನಾಂಗಗಳ ಪ್ರತಿನಿಧಿಗಳು ಆಡಳಿತ ಮಂಡಳಿಯಲ್ಲಿದ್ದಾರೆ. ಇವರೆಲ್ಲರು ದೇವತಾ ಕಾರ್ಯಗಳಲ್ಲಿ ಇಲ್ಲಿಯವರೆಗು ಬಿಳಿಯ ಪಂಚೆ ಶಾಲನ್ನು ಧರಿಸಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕಟ್ಟಮನೆ ಸೋನಾ ತಿಳಿಸಿದರು.
::: ಸುಳ್ಳು ಆರೋಪ ::: ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಉತ್ಸವದ ದೊಡ್ಡ ಹಬ್ಬದ ಸಂದರ್ಭ ದೌರ್ಜನ್ಯ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಸುದ್ದಿಗಳೆಲ್ಲವು ಸುಳ್ಳು. ಅಂತಹ ಯಾವುದೇ ಘಟನೆಗಳು ನಡೆದಿಲ್ಲವೆಂದು ಹೇಳಿದರು. ಉತ್ಸವದ ಸಂಜೆಯ ವೇಳೆ ದೇವರ ಜಳಕಕ್ಕೆ ತೆರಳುವ ಹಂತದಲ್ಲಿ ಮೂರು ನಾಲ್ಕು ಜೀಪ್‌ಗಳಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ ಬಂದವರಿಗೆ, ದೇವಸ್ಥಾನದ ನಿಯಮಗಳ ಬಗ್ಗೆ ತಿಳಿಸಲಾಗಿತ್ತು. ಈ ಹಂತದಲ್ಲಿ ಆರಂಭಗೊoಡ ಭಿನ್ನಾಭಿಪ್ರಾಯ ಸುಮಾರು ಐದು ಗಂಟೆಗಳ ಕಾಲ ವಿಸ್ತರಿಸಿತು. ಇದು ನಿಜಕ್ಕೂ ಬೇಸರವನ್ನು ಉಂಟು ಮಾಡಿದೆ ಎಂದರು. ಘಟನೆಯ ಬಳಿಕ ದೇವಸ್ಥಾನದಿಂದ ಪರಂಬು ಪೈಸಾರಿಯ ನಂದಿಪಾರೆ ಎಂಬಲ್ಲಿಗೆ ದೇವರು ಜಳಕಕ್ಕೆ ತೆರಳಿ, ನಡುರಾತ್ರಿಯ ವೇಳೆ ದೇವಸ್ಥಾನಕ್ಕೆ ಮರಳುವ ಸಂದರ್ಭ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳಿದ್ದು, ಅವರು ‘ಹರ ಹರ ಮಹದೇವ’ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಂದರ್ಭ ದೌರ್ಜನ್ಯದಂತಹ ಯಾವುದೇ ಘಟನೆಗಳು ನಡೆದಿಲ್ಲ ಮತ್ತು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಗಳು ಸತ್ಯಕ್ಕೆ ದೂರವಾದುದೆಂದು ಹೇಳಿದರು.
ದೇವರ ಮುಂದೆ ಎಲ್ಲರು ಸರ್ವ ಸಮಾನರು, ನಾನು ಮೇಲು, ಕೀಳು ಎನ್ನುವ ಭಾವನೆ ಎಂದಿಗೂ ಸಲ್ಲದು. ಇವೆಲ್ಲವುಗಳನ್ನು ಮೀರಿ ಪ್ರೀತಿ ವಿಶ್ವಾಸದ, ಸೌಹಾರ್ದತೆ ಎಲ್ಲರಲ್ಲೂ ಮೂಡಬೇಕಾಗಿದೆ. ಶಕ್ತಿ ಪ್ರದರ್ಶನದ ಕಾಲ ಹೋಗಿದೆಯೆಂದು ನುಡಿದ ಅವರು, ಸರ್ವ ಸಮಾನತೆಯ ಚಿಂತನೆಯ ದೇವಸ್ಥಾನದ ವಸ್ತ್ರ ಸಂಹಿತೆಯನ್ನು ಒಪ್ಪುವುದು ಅಗತ್ಯವಾಗಿದೆ ಎಂದು ಕಟ್ಟೆಮನೆ ಸೋನಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಸಮಿತಿ ಸದಸ್ಯರಾದ ಹೆಚ್.ಎಸ್.ಪುರುಷೋತ್ತಮ, ಗ್ರಾಮಸ್ಥರಾದ ಹೆಚ್.ಸಿ. ರಾಮಚಂದ್ರ, ಹೆಚ್.ವಿ.ಗನು, ಹೆಚ್.ಎಂ.ಹರೀಶ್ ಹಾಗೂ ದೇವಸ್ಥಾನದ ಸ್ವಯಂ ಸೇವಕ ರೋಷನ್ ಕಟ್ಟೆಮನೆ ಉಪಸ್ಥಿತರಿದ್ದರು.