ಮಡಿಕೇರಿ ಜ.4
NEWS DESK : ಕೊಡಗಿನ ಮೂಲ ನಿವಾಸಿ ಜನಾಂಗವಾಗಿರುವ ಕೊಡವರು, ಇಂದು ತಮ್ಮ ಅಸ್ತಿತ್ವಕ್ಕಾಗಿ ತಮ್ಮ ತಾಯಿನೆಲದಲ್ಲಿಯೇ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತಮ್ಮತನವನ್ನು ಕಾಯ್ದುಕೊಳ್ಳಲು, ಕೊಡವಾಮೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ಏಳ್‌ನಾಡ್ ಕೊಡವರ ಜವಾಬ್ದಾರಿ ಅಧಿಕವಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ನಾಲ್ಕು ಕೊಡವ ಸಮಾಜಗಳು ಒಮ್ಮತದ ಯೋಜನೆ ತಯಾರಿಸಬೇಕಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ, ನಡುಬಾಡೆ ಸಂಪಾದಕ ಚಾಮೆರ ದಿನೇಶ್ ಬೆಳ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಂದೂರು ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಉಮ್ಮೇಟಿ ಕೋಲ್ ಮಂದ್ ಮತ್ತು ಪುತ್ತರಿ ಊರೋರ್ಮೆ ಕಾರ್ಯಕ್ರಮವನ್ನು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಏಳ್‌ನಾಡ್ ಎಂದರೆ ಕೊಡವಾಮೆಯ ಗೂಡು ಎನ್ನುವ ನಂಬಿಕೆ ಇದೆ. ಆದರೆ ಅದು ಇಂದಿನ ಕಾಲದಲ್ಲಿ ಎಷ್ಟರ ಮಟ್ಟಿಗೆ ಆ ಗೂಡನ್ನ ಉಳಿಸಿಕೊಂಡಿದ್ದೇವೆ ಎನ್ನುವುದನ್ನ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ ಎಂದರು. ಕೊಡಗಿನ ಮೂರು ಪ್ರಮುಖ ಭಾಗಗಳಾದ ಕ್‌ಗ್ಗಟ್ಟ್, ಮೇಂದಲೆ ಮತ್ತು ಏಳ್‌ನಾಡ್ ಭಾಗಗಳನ್ನು ತುಲನೆ ಮಾಡಿದರೆ, ಪದ್ಧತಿ, ಪರಂಪರೆ, ಆಟ್ ಪಾಟ್‌ಗಳಲ್ಲಿ ಏಳ್‌ನಾಡ್ ಮುಂಚೂಣಿಯಲ್ಲಿ ಇದೆ. ಆದರೆ ಕೊಡವಾಮೆಗೆ ಸಂಭಂದಿಸಿದ ಹೋರಾಟದ ವಿಚಾರಕ್ಕೆ ಬಂದಾಗ ನಾವು ಸಾಕಷ್ಟು ಹಿಂದೆ ಇದ್ದೇವೆ. ಮೇಂದಲೆ ಮತ್ತು ಕ್‌ಗ್ಗಟ್ಟ್ ನಾಡಿನೊಂದಿಗೆ ನಾವೂ ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಕೈ ಜೋಡಿಸಿದರೆ ಕೊಡವಾಮೆಯ ಬೆಳವಣಿಗೆಗೆ ಮತ್ತಷ್ಟು ಪ್ರಖರತೆ ದೊರೆಯಲಿದೆ ಎಂದರು. ಆಟ್ ಪಾಟ್, ಪದ್ಧತಿ ವಿಚಾರದಲ್ಲೂ ಏಳ್‌ನಾಡ್ ತನ್ನ ಘತ ವೈಭವವನ್ನು ಕಳೆದುಕೊಳ್ಳುತ್ತಿದ್ದು, ಕಲೆ ಸಂಸ್ಕೃತಿಯ ಜೊತೆಗೆ ಕೊಡವಾಮೆಯ ಉಳಿವಿಗೂ ನಾವು ಕೈಜೋಡಿಸಬೇಕಿದೆ ಎಂದರು. ಕೊಡಗಿನ ಇತಿಹಾಸಕ್ಕೆ ಏಳ್‌ನಾಡಿನ ಕೊಡುಗೆ ಮಹತ್ತರವಾಗಿದ್ದು, ನಮ್ಮ ನಾಡಿನ ಬಗ್ಗೆ ನಮಗಿರುವ ಅಭಿಮಾನದ ಕೊರತೆಯೇ ಇದಕ್ಕೆ ಮೂಲ ಕಾರಣ. ಈ ಅಭಿಮಾನವನ್ನು ಬೆಳೆಸುವತ್ತ ನಾವುಗಳು ಮುಂದಡಿ ಇಡಬೇಕು ಎಂದರು. ಕೊಡವಾಮೆಯ ಭೀರ್ಯ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಇಂದಿನಿಂದಲೇ ಮಕ್ಕಳನ್ನು ಕೊಡವ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯಬೇಕು. ಈ ಜವಾಬ್ದಾರಿ ತಾಯಂದಿರ ಮೇಲೆ ಹೆಚ್ಚಿದ್ದು, ಕೇವಲ ಶಾಲೆ ಮತ್ತು ಅಂಕ ಪಡೆಯುವತ್ತಲೇ ಗಮನ ಕೇಂದ್ರೀಕರಿಸದೆ, ನಮ್ಮ ಮೂಲತನದ ಉಳಿವಿಗೆ ಸಂಸ್ಕೃತಿಯ ಅರಿವು ಮೂಡಿಸುವುದೂ ಅನಿವಾರ್ಯವಿದೆ ಎಂದರು. ಈ ನಿಟ್ಟಿನಲ್ಲಿ ಏಳ್‌ನಾಡ್ ಭಾಗದ ಪ್ರಮುಖ ಸಮಾಜಗಳಾದ ಮಡಿಕೇರಿ, ಮಕ್ಕಂದೂರು, ಮಾದಾಪುರ, ಗರ್ವಾಲೆ ಕೊಡವ ಸಮಾಜಗಳು ಒಮ್ಮತದ ಯೋಜನೆಯನ್ನು ತಯಾರಿಸುವ ಮೂಲಕ, ಮುಂದಿನ ದಿನಗಳಲ್ಲಿ, ಕ್‌ಗ್ಗಟ್ಟ್ ಮತ್ತು ಮೇಂದಲೆ ನಾಡ್‌ಗಳೊಂದಿಗೆ ಕೈ ಜೋಡಿಸಿದರೆ, ಕೊಡವರ ಒಗ್ಗಟ್ಟಿಗೆ ಮತ್ತಷ್ಟು ಬಲ ಬರಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಜನಾಂಗದ ಏಳಿಗೆಗೆ ಮಕ್ಕಂದೂರು ಕೊಡವ ಸಮಾಜ ಎಂದಿಗೂ ಮುಂದೆ ನಿಂತಿದ್ದು, ಯಾವುದೇ ಸಂದರ್ಭದಲ್ಲಿಯೂ ನಾವು ಜನಾಂಗದ ಜೊತೆ ನಿಲ್ಲಲಿದ್ದೇವೆ ಎಂದರು. ಮುಂದಿನ ದಿನಗಳಲ್ಲಿ ಯುವಕರನ್ನು ಕೊಡವಾಮೆಯತ್ತ ಸೆಳೆಯಲು ಹಲವು ಯೋಜನೆಗಳನ್ನು ಸಿದ್ದಪಡಿಸುವ ಚಿಂತನೆ ಇದ್ದು, ಈ ನಿಟ್ಟಿನಲ್ಲಿ ಕೊಡವ ಸಮಾಜದ ಮಹಿಳಾ ಘಟಕ ಮತ್ತು ಯುವ ಘಟಕ ಶ್ರಮಿಸುತ್ತಿದೆ. ಸರ್ವರೂ ಸಹಕರಿಸಿದರೆ ಕೆಲವೇ ವರ್ಷಗಳಲ್ಲಿ ಪ್ರಬುದ್ಧ ಕೊಡವಾಭಿಮಾನದ ಸಮಾಜವಾಗಿ ರೂಪಿಸಲು ಪಣತೊಡುವುದಾಗಿ ಭರವಸೆಯಿತ್ತರು. ಕಾರ್ಯಕ್ರಮದಲ್ಲಿ ಮಕ್ಕ್ನಾಡ್ ತಕ್ಕರಾದ ಸಬ್ಬುಡ ದಿನೇಶ್, ಪಾಲೇರಿ ನಾಡ್ ತಕ್ಕರಾದ ಐಮುಡಿಯಂಡ ದೇವಯ್ಯ, ಬದಿಗೇರಿ ನಾಡ್‌ತಕ್ಕರಾದ ಶಾಂತೆಯಂಡ ರಾಜೇಶ್ ಕಾವೇರಪ್ಪ, ಮಕ್ಕಂದೂರು ಕೊಡವ ಸಮಾಜ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಮಹಿಳಾಘಟಕ, ಯುವ ಘಟಕದ ಪಧಾದಿಕಾರಿಗಳು ಮತ್ತು ಸದಸ್ಯರು, ಸಮಾಜ ವ್ಯಾಪ್ತಿಯ ಕೊಡವಾಭಿಮಾನಿಗಳು ಹಾಜರಿದ್ದರು. ಸಮಾಜ ಕಾರ್ಯದರ್ಶಿ ಮುಲುವೆರ ಬಿದ್ದಪ್ಪ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಮೊದಲಿಗೆ ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಉಮ್ಮೇಟಿ ಮಂದ್‌ನಲ್ಲಿ ಕೋಲಾಟ ಆಡುವ ಮೂಲಕ ಸಂಭ್ರಮಿಸಲಾಯಿತು.