ಕುಶಾಲನಗರ ಜ.4 NEWS DESK : ರಾಜ್ಯದಲ್ಲಿಯೇ ಪ್ರಥಮ ಹಾಲಿನ ಡೈರಿ ಎಂಬ ಹೆಸರು ಗಳಿಸಿರುವ ಕೂಡಿಗೆ ಹಾಲಿನ ಡೈರಿಯು ಸದ್ಯದಲ್ಲೇ ಮೇಲ್ದರ್ಜೆಗೆ ಏರಲಿದ್ದು, ಮುಂದಿನ ದಿನಗಳಲ್ಲಿ ನಮ್ಮ ಡೈರಿಯಲ್ಲಿ ಮೊಸರು ಹಾಗೂ ಮಜ್ಜಿಗೆ ಉತ್ಪನ್ನ ತಯಾರಿಕೆ ಘಟಕ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟ ಕೊಡಗು ಘಟಕದ ನಿರ್ದೇಶಕರಾದ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಕೂಡಿಗೆ ಹಾಲಿನ ಡೈರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 1955ರಲ್ಲಿ ರಾಜ್ಯದಲ್ಲಿಯೇ ಪ್ರಥಮ ಹಾಲಿನ ಡೈರಿಯಾಗಿ ಕೂಡಿಗೆ ಡೈರಿ ಸ್ಥಾಪನೆಗೊಂಡಿದೆ. ಇದನ್ನು ಮದರ್ ಡೈರಿ ಎಂದು ಕೂಡ ಕರೆಯಲಾಗುತ್ತದೆ. ಇದೀಗ ಕಚೇರಿಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ರು.34 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಕಚೇರಿ ನಿರ್ವಹಣೆಗೆ ಕಟ್ಟಡ ನಿರ್ಮಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ರು.20 ಕೋಟಿ ವೆಚ್ಚದಲ್ಲಿ ಕೂಡಿಗೆ ಡೈರಿಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾವುದು ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸುಮಾರು 39 ಹಾಲು ಉತ್ಪಾದಕರ ಸಂಘಗಳಿದ್ದು, ಪ್ರತಿ ದಿನ ಕೂಡ ಜಿಲ್ಲೆಯಿಂದ ಸುಮಾರು 30 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ. ದಿನವೊಂದಕ್ಕೆ ಸುಮಾರು 55 ಸಾವಿರ ಲೀಟರ್ ಹಾಲು ಕೂಡಿಗೆ ಡೈರಿಯಿಂದ ಮಾರಾಟವಾಗುತ್ತದೆ. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಅರಕಲುಗೂಡು, ರಾಮನಾಥಪುರದ ವಿವಿಧ ಹಾಲು ಉತ್ಪಾದರಕ ಸಂಘದಿಂದ 25 ಸಾವಿರ ಲೀಟರ್ ಹಾಲನ್ನು ಟ್ಯಾಂಕರ್ ಮೂಲಕ ತರಲಾಗುತ್ತಿದ್ದು, ಸಂಸ್ಕರಣೆ ಮಾಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕೆಲವು ಕಡೆಗಳಲ್ಲಿ ಹಾಲಿನಲ್ಲಿ ಕಲಬೆರಕೆ ಪ್ರಕರಣಗಳು ಕಂಡುಬಂದಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರಿಂದ ಹಲವು ಹೈನುಗಾರರು ಉತ್ತಮ ಗುಣಮಟ್ಟದ ಹಾಲನ್ನು ಡೈರಿಗೆ ನೀಡುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದ ಅವರು, ಕಳಪೆ ಗುಣಮಟ್ಟದ ಹಾಲನ್ನು ನಾವು ತಿರಸ್ಕರಿಸಿದ್ದು, ಅಂತಹ ಹಾಲು ಕೆಲವು ಖಾಸಗಿ ಸಂಸ್ಥೆಗಳು ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಗ್ರಾಹಕರು ಎಚ್ಚರ ವಹಿಸುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಕಾಫಿ ಕೃಷಿ ಪ್ರಧಾನವಾಗಿದೆ. ಇದರಿಂದ ಹೈನುಗಾರಿಕೆ ಮಾಡುವವರ ಸಂಖ್ಯೆ ತೀವ್ರ ಕಡಿಮೆಯಿದೆ. ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಹೆಚ್ಚು ಹಾಲು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರಿಗೆ ಪ್ರೋತ್ಸಾಹ ನೀಡಲಾಗುವುದು ಕೃಷಿಕರು ಡೈರಿಗೆ ಹಾಲನ್ನು ನೀಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು. ಗುಡ್ಡೆಹೊಸೂರಿನಲ್ಲಿ ಬಲ್ಕ್ ಮಿಲ್ಕ್ ಕೂಲರ್ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎಂದು ವಿವರಿಸಿದರು. ಒಂದು ಲೀಟರ್ ಹಾಲಿಗೆ ರು.30.50 ಹೈನುಗಾರರಿಗೆ ನೀಡಲಾಗುತ್ತಿದೆ. ಹಾಲು ದರ ಹೆಚ್ಚಳ ಮಾಡುವ ಬಗ್ಗೆ ಕೆ.ಎಂ.ಎಫ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಇರತೆ ಉತ್ಪನ್ನ ಮಾರಾಟ ಮಾಡಿದರೆ ಕ್ರಮ : ಜಿಲ್ಲೆಯಲ್ಲಿ ಸುಮಾರು 50ಕ್ಕೂ ಅಧಿಕ ನಂದಿನಿ ಕ್ಷಿರ ಮಾರಾಟ ಕೇಂದ್ರಗಳಿದೆ. ಕೆಲವು ಕಡೆಗಳಲ್ಲಿ ನಂದಿನಿ ಉತ್ಪನ್ನ ಬದಲಾಗಿ ಇತರೆ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬರುತ್ತಿದೆ. ಇದೇ ಮುಂದುವರೆದರೆ ಅಂತಹವರ ಏಜೆನ್ಸಿಗಳನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಇದಲ್ಲದೆ ಜಿಲ್ಲೆಯ ವಿವಿಧ ಕ್ಷಿರ ಕೇಂದ್ರಗಳಲ್ಲಿನ ಸಮಸ್ಯೆಗೆ ಬಗ್ಗೆ ಪರಿಶೀಲನೆ ಮಾಡಲಾಗುವುದು, ಸಾರ್ವಜನಿಕರು ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಂಸ್ಕರಣೆ ಹೆಚ್ಚಳ : : ಕೂಡಿಗೆ ಹಾಲಿನ ಡೈರಿಯಲ್ಲಿ ಪ್ರಸ್ತುತ 50 ಸಾವಿರ ಲೀಟರ್ ಹಾಲನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಕರಣಾ ಘಟಕ ಮೇಲ್ದರ್ಜೆಗೇರಿಸಿ ಸುಮಾರು 80 ಸಾವಿರದಿಂದ ಒಂದು ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆದಷ್ಟು ಶೀಘ್ರ ಈ ಕೆಲಸ ಆಗಲಿದೆ ಎಂದು ತಿಳಿಸಿದರು. ಹೈನುಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಹೆಣ್ಣು ಕರುಗಳ ಜನನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಒಕ್ಕೂಟದಿಂದ ಕಡಿಮೆ ದರದಲ್ಲಿ ಹಸುಗಳಿಗೆ ಕೃತಕ ಗರ್ಭಧಾರಣೆ ವ್ಯವಸ್ಥೆ ಮಾಡಲಾಗಿದೆ. ಇದನ್ನು ಹೈನುಗಾರರು ಸದ್ಬಳಕೆ ಮಾಡಿ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು. ಕೊಡಗು ಜಿಲ್ಲಾ ಕೇಂದ್ರದಲ್ಲಿ ನಗದು ರಹಿತ ವಹಿವಾಟು ವ್ಯವಸ್ಥೆ ಮಾಡಲಾಗುವುದು ಎಂದರು. ಸಂವಾದದ ಬಳಿಕ ಕೂಡಿಗೆ ಹಾಲಿನ ಡೈರಿಯಲ್ಲಿ ಹಾಲು ಸಂಸ್ಕರಣೆ ಮಾಡುವ ಬಗ್ಗೆ ನಿರ್ದೇಶಕರು ಪತ್ರಕರ್ತರಿಗೆ ಮಾಹಿತಿ ನೀಡಿದರು. ಸಂವಾದದಲ್ಲಿ ಕೂಡಿಗೆ ಡೈರಿ ವಿಸ್ತರಣಾ ಅಧಿಕಾರಿ ವೀಣಾ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್, ಉಪಾಧ್ಯಕ್ಷ ಜಿ.ವಿ. ರವಿಕುಮಾರ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಪತ್ರಕರ್ತರು ಸಂವಾದದಲ್ಲಿ ಪಾಲ್ಗೊಂಡಿದ್ದರು.