ಮಡಿಕೇರಿ ಜ.4 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಕುವೆಂಪು ರಚಿಸಿರುವ ‘ನಾಡಗೀತೆಗೆ ನೂರು ವರ್ಷ’ ಸಹಸ್ರ ಕಂಠ ಗಾಯನ ಕಾರ್ಯಕ್ರಮವು ನಡೆಯಿತು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನೋತ್ಸವ ಹಾಗೂ ಕುವೆಂಪು ರಚಿತ ನಾಡಗೀತೆ ಆಶಯಕ್ಕೆ ನೂರು ವರ್ಷ ಪ್ರಯುಕ್ತ ನಾಡಗೀತೆ ಸಹಸ್ರ ಕಂಠ ಗಾಯನ ಕಾರ್ಯಕ್ರಮ ಜರುಗಿತು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ನಾಡು ಕಂಡ ಶ್ರೇಷ್ಠ ಕವಿ ಕುವೆಂಪು ಅವರು ನಾಡಗೀತೆ ರಚಿಸಿ ನೂರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಸಹಸ್ರ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶಾಲಾ ಕಾಲೇಜು ಹಂತದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕುವೆಂಪು ಅವರು ನಾಡಿಗೆ ನೀಡಿದ ಕೊಡುಗೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು. 1924-25 ರ ಅವಧಿಯಲ್ಲಿ ಕುವೆಂಪು ಅವರ ಆತ್ಮಕಥೆ ‘ನೆನಪಿನ ದೋಣಿ’ಯಲ್ಲಿ ಉಲ್ಲೇಖಿಸಿರುವಂತೆ ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ನಾಡಗೀತೆಯನ್ನು ರಚಿಸಿ ಕನ್ನಡ ನಾಡಿನ ಸಮೃದ್ಧಿಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ಟಿ.ಪಿ.ರಮೇಶ್ ನುಡಿದರು. 1925ರ ಸುಮಾರಿಗೆ ಭಾರತ ಒಂದು ಗಣರಾಜ್ಯವಾಗಿ ಭಾಷಾವಾರು ಪ್ರಾಂತ್ಯ ರಚನೆ, ಕನ್ನಡ ನಾಡು ಏಕೀಕರಣವಾಗಿ ಕರ್ನಾಟಕ ಹೆಸರು ನಾಮಕರಣ ಹೀಗೆ ಕನ್ನಡ ನಾಡು, ಭಾಷೆ ಬೆಳವಣಿಗೆಗೆ ಕುವೆಂಪು ಅವರು ಶ್ರಮಿಸಿದ್ದಾರೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ರಸಖುಷಿ ಕವಿಯಾದ ಕುವೆಂಪು ಅವರು ನಾಡಿನ ಸರ್ವತೋಮುಖ ಬೆಳವಣಿಗೆಗೆ ಸಾಹಿತ್ಯದ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಕುವೆಂಪು ಅವರು ಕನ್ನಡನಾಡು ಭಾರತ ಮಾತೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ನಾಡಗೀತೆಯಲ್ಲಿ ವಿವರಿಸಿದ್ದಾರೆ ಎಂದರು. ‘ಭಾರತ ಜನನಿಯ ತನುಜಾತೆ’ ‘ಜಯಹೇ ಕರ್ನಾಟಕ ಮಾತೆ’ ‘ಜನನಿಯ ಜೋಗುಳ’, ಕಪಿಲ ಪತಜಂಲಿ ಗೌತಮ(ಜೀನ)ನುತ, ‘ಶಂಕರ ರಾಮಾನುಜ’, ‘ಕೃಷ್ಣ ಶರಾವತಿ(ವರ) ತುಂಗಾ’, ‘ಸರ್ವ ಜನಾಂಗದ ಶಾಂತಿ(ನಿಕೇತನ)ಯ ತೋಟ’, ‘ಗಾಯಕ ವೈಣಿಕ’ ಎಂಬಂತಹ ಪದಪುಂಜಗಳನ್ನು ಗಮನಿಸಬಹುದು ಎಂದರು. ರೂಪಾಂಶ ಭಾವ, ಭಾಷೆ ಬದಲಾಗಿದ್ದರೂ ಮೂಲ ಆಶಯ ಮಾತ್ರ ಮೂಲದ್ದೇ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಮೂಲದ ‘ಪಚ್ಚೆಯ ನವ ಕಂಠೀಮಾಲೆ’ ಯಂತಹ ಉಕ್ತಿಗೆ ಬದಲಾಗಿ ‘ಹಸುರಿನ ಗಿರಿಗಳ ಸಾಲೆ ನಿನ್ನಯ ಕೊರಳಿನ ಮಾಲೆ’ ಎಂಬಂತಹ ಸಾಲುಗಳು ಬಂದಿರುವುದು ಅವರ ‘ಭಾವ’ ಬೆಳವಣಿಗೆಯ ಸಂಕೇತವಾಗಿದೆ ಎಂದು ಅವರು ವಿವರಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆ.ಮಂಜುಳ ಅವರು ಮಾತನಾಡಿ ‘ಭಾರತ ಜನನಿಯ ತನುಜಾತೆ’ ಮತ್ತು ‘ಸರ್ವ ಜನಾಂಗದ ಶಾಂತಿಯ ತೋಟ’ ಈ ನಾಡಗೀತೆಯ ಮೂಲ ಆಶಯಗಳೆಂಬುದು ಸ್ಪಷ್ಟಪಡಿಸಿರುವಂತೆ, ಕನ್ನಡ ನಾಡಿನ ವಿಸ್ತೀರ್ಣವನ್ನು ಚದರ ಮೈಲಿಗಳಲ್ಲಿ ಅಳೆಯುವುದಕ್ಕಿಂತ ಚದರ ವರ್ಷಗಳಲ್ಲಿ ಅಳೆಯಬೇಕಾಗಿದೆ. ನಾಡು ಅಥವಾ ದೇಶ ಎಂದರೆ ಅದರ ಭೂಭಾಗ ಮಾತ್ರವಲ್ಲ ಅದರ ಜನ-ಭಾಷೆ-ಸಂಸ್ಕøತಿ ಎಲ್ಲವೂ ಸೇರುತ್ತದೆ. ಇವು ತಮ್ಮ ತನವನ್ನು ಉಳಿಸಿಕೊಂಡು ವಿಶ್ವಾತ್ಮಕವಾಗುವ ಆಶಯಗಳೆಂದರೂ ತಪ್ಪಾಗುವುದಿಲ್ಲ. ಮುಂದೆ ಅವರೇ ಪ್ರತಿಪಾದಿಸಿದ ‘ವಿಶ್ವಮಾನವ ಸಂದೇಶ’ಕ್ಕೂ ಆಶಯಗಳಾಗಿವೆ ಎಂದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ ಅವರು ಮಾತನಾಡಿ ಕನ್ನಡ ನಾಡು ಕಟ್ಟುವಲ್ಲಿ ಕುವೆಂಪು ಅವರು ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ವಿಶ್ವಮಾನವ ಸಂದೇಶವನ್ನು ನೀಡಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ಮಾತನಾಡಿ ನಾಡುಕಂಡ ಶ್ರೇಷ್ಠ ಕವಿ ಕುವೆಂಪು ಆಗಿದ್ದಾರೆ. ರಾಷ್ಟ್ರ ಹಾಗೂ ನಾಡಿನ ಬಗ್ಗೆ ನಾಡಗೀತೆಯಲ್ಲಿ ವರ್ಣೀಸಿರುವುದು ವಿಶೇಷವಾಗಿದೆ. ರಾಷ್ಟ್ರದ ಹಿರಿಮೆಯನ್ನು ನಾಡಗೀತೆ ಮೂಲಕ ಸಾರಿದ್ದಾರೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಪ್ರಸನ್ನ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಕೆ.ವಿ.ಶಶಿಕಲಾ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಸುಶೀಲ, ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಆರ್.ಪಿ.ಚಂದ್ರಶೇಖರ್, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಿ.ಟಿ.ಶಿವಶಂಕರ, ಪ್ರಾಥಮಿಕ ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಎನ್.ಜಗದೀಶ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಜೆ.ಸಿ.ಶೇಖರ್, ವಿಜೇತ್, ಹರಿಣಿ ವಿಜಯ್, ಡಾ.ಕಾವೇರಿ ಪ್ರಕಾಶ್, ಪ್ರೇಮ್‍ಕುಮಾರ್, ಪ್ರೇಮ ರಾಘವಯ್ಯ, ಜಮೀರ್, ಇತರರು ಇದ್ದರು.