ಮಡಿಕೇರಿ ಜ.7 NEWS DESK : ನವದೆಹಲಿಯಲ್ಲಿ ಜ.12 ರಂದು ನಡೆಯಲಿರುವ ರಾಷ್ಟ್ರಮಟ್ಟದ ಯುವ ಜನೋತ್ಸವದಲ್ಲಿ ಕೊಡಗಿನ ಶ್ವೇತನ್ ಜಿ.ರೈ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಡಿಕೇರಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಯುವ ಒಕ್ಕೂಟ ಕೊಡಗು, ತಾಲ್ಲೂಕು ಯುವ ಒಕ್ಕೂಟ ಮಡಿಕೇರಿ, ಸೋಮವಾರಪೇಟೆ, ಹಾಗೂ ವಿರಾಜಪೇಟೆ, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಜನೋತ್ಸವದ ವೈಯಕ್ತಿಕ ವಿಜ್ಞಾನ ಮೇಳ ವಿಭಾಗದಲ್ಲಿ ಭಾಗವಹಿಸಿದ ಶ್ವೇತನ್ ಜಿ.ರೈ ಪ್ರಥಮ ಸ್ಥಾನ ಗಳಿಸಿದ್ದರು. ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯುವ ಜನೋತ್ಸವದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ. ಕಳತ್ಮಾಡ್ ಲಯನ್ಸ್ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಶ್ವೇತನ್ ಜಿ.ರೈ ಗೋಣಿಕೊಪ್ಪ ವಿಜಯನಗರದ ನಿವಾಸಿ ಬಿ.ಟಿ.ಗಣೇಶ್ ರೈ ಹಾಗೂ ಗೀತಾ ರೈ ದಂಪತಿ ಪುತ್ರ.