ಮಡಿಕೇರಿ ಜ.7 NEWS DESK : ಕೊಡಗು ಜಿಲ್ಲೆಯಲ್ಲಿ ವೇದಪಾಠ ಶಾಲೆ ಆರಂಭಿಸುವ ಉದ್ದೇಶಕ್ಕೆ ಸೂಕ್ತ ಜಾಗವನ್ನು ಮಂಜೂರು ಮಾಡಬೇಕೆಂದು ಕೊಡಗು ಪುರೋಹಿತ ಕಾರ್ಮಿಕರ ಫೆಡರೇಷನ್ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಬಳಿ ಮನವಿ ಮಾಡಿದೆ. ವೇದಪಾಠ ಶಾಲೆ ಆರಂಭಿಸಲು ಜಾಗ ಮಂಜೂರು ಮಾಡುವುದಾಗಿ ಶಾಸಕರು ನಿಯೋಗಕ್ಕೆ ಭರವಸೆ ನೀಡಿರುವುದಾಗಿ ಪುರೋಹಿತ ಕಾರ್ಮಿಕರ ಫೆಡರೇಷನ್ ನ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್ ತಿಳಿಸಿದರು. ಭಾರತದ ಎಲ್ಲಾ ಜ್ಞಾನ ಶಾಖೆಗಳಿಗೂ ಮಾತೆಯಾಗಿರುವ ವೇದಗಳ ಅಧ್ಯಯನಕ್ಕೆ ಸ್ಥಳಾವಕಾಶವನ್ನು ನೀಡುವುದು ಕೊಡಗು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ವೇದಪಾಠ ಶಾಲೆಯೊಂದಿಗೆ ವೈದಿಕ ಭವನವನ್ನು ಸ್ಥಾಪಿಸಿ ವೈದಿಕರ ಧಾರ್ಮಿಕ ವಿಧಿಗಳಿಗೂ ಅನುಕೂಲ ಕಲ್ಪಿಸುವ ಕಾರ್ಯವಾಗಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಫೆಡರೇಷನ್ ರಾಜ್ಯಾಧ್ಯಕ್ಷ ಡಾ.ಶ್ರೀನಿವಾಸನ್ ಹೇಳಿದ್ದಾರೆ. ಈ ಸಂದರ್ಭ ಫೆಡರೇಷನ್ ಉಪಾಧ್ಯಕ್ಷ ಸುದರ್ಶನ್, ಖಜಾಂಚಿ ಎಸಳೂರು ಉದಯಕುಮಾರ್, ಕಾರ್ಯದರ್ಶಿ ಪ್ರಸಾದ್ ಮತ್ತಿತರರು ಹಾಜರಿದ್ದರು. ಕೊಡಗು ಜಿಲ್ಲೆಯ ಅಸಂಘಟಿತ ಪುರೋಹಿತರನ್ನು ಸಂಘಟಿಸಲು ತಾಲ್ಲೂಕು ಸಮಿತಿಗಳನ್ನು ರಚಿಸಲಾಗುವುದು. ವಿವಿಧ ದೇವಾಲಯಗಳಲ್ಲಿ ಅರ್ಚಕರಾಗಿ ಪರಿಚಾರಕರಾಗಿ ಮತ್ತು ಅಡುಗೆಯವರಾಗಿ ಸೇವೆ ಸಲ್ಲಿಸುತ್ತಿರುವವರು ಸದಸ್ಯರಾಗಬಹುದು. ಆಸಕ್ತರು 9880836456 9945853543 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ಎಂದು ಪ್ರಸನ್ನ ಭಟ್ ಮಾಹಿತಿ ನೀಡಿದರು.