ಮಡಿಕೇರಿ ಜ.10 NEWS DESK : ಕಟ್ಟೆಮಾಡು ಗ್ರಾಮದ ಶ್ರೀಮಹಾಮೃತ್ಯುಂಜಯ ದೇವಾಲಯದ ವಸ್ತ್ರ ಸಂಹಿತೆ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ ಫೆ.10 ರವರೆಗೆ ಜಿಲ್ಲಾಧಿಕಾರಿಗಳು ಕಾಲಾವಕಾಶ ನೀಡಿದ್ದು, ಅಷ್ಟರೊಳಗೆ ಕಟ್ಟೆಮಾಡು ಗ್ರಾಮಸ್ಥರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಶ್ರೀಮಹಾಮೃತ್ಯುಂಜಯ ದೇವಾಲಯ ಸಮಿತಿಯ ಅಧ್ಯಕ್ಷ ಶಶಿ ಜನಾರ್ಧನ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಧ್ಯದಲ್ಲೇ ಗ್ರಾಮಸ್ಥರ ಸಭೆಯ ದಿನಾಂಕವನ್ನು ತಿಳಿಸಲಾಗುವುದು, ಈ ಸಭೆಯ ಮೂಲಕ ಭಿನ್ನಾಭಿಪ್ರಾಯಗಳು ಸುಖಾಂತ್ಯಗೊಳ್ಳಲಿದೆ ಎನ್ನುವ ವಿಶ್ವಾಸವಿದೆ. ಸಭೆಯಲ್ಲಿ ಸಂಗ್ರಹಿಸಲಾಗುವ ಅಭಿಪ್ರಾಯದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಫೆ.10 ರಂದು ನೀಡಲಾಗುವುದು ಎಂದರು. ಈ ಹಿಂದೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರನ್ನು ಸಮಿತಿ ಭೇಟಿ ಮಾಡಿದ ಸಂದರ್ಭ ಜಿಲ್ಲಾಡಳಿತದ ಬಳಿ ಕಾಲಾವಕಾಶ ಕೋರುವಂತೆ ಅವರು ಸಲಹೆ ನೀಡಿದ್ದರು. ಅದರಂತೆ ನಾವು ಕಾಲಾವಕಾಶ ಕೋರಿಕೊಂಡೆವು ಎಂದು ತಿಳಿಸಿದರು. ನೋಂದಣಿಯಾಗಿರುವ ದೇವಾಲಯ ಸಮಿತಿಯ ಬೈಲಾದಲ್ಲಿ ಯಾವುದೇ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಡಲು ಮತ್ತು ಕಟ್ಟುಪಾಡು ಆಚರಿಸಲು ಅವಕಾಶವಿಲ್ಲ, ದೇವಾಲಯಕ್ಕೆ ಬರುವ ಭಕ್ತರೆಲ್ಲರೂ ಒಂದೇ ಎಂದು ತಿಳಿಸಲಾಗಿದೆ. ಸಂವಿಧಾನದ ನೀತಿ ನಿಯಮಗಳಿಗನುಸಾರವಾಗಿ ಬೈಲಾವನ್ನು ರಚಿಸಲಾಗಿದೆ. ಕಟ್ಟೆಮಾಡು ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರು ನೆಲೆಸಿದ್ದಾರೆ, ಗ್ರಾಮದ ನಾಲ್ಕು ಪೈಸಾರಿಯಲ್ಲಿ ಹಿಂದುಳಿದವರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರುಗಳೇ ದೇವಸ್ಥಾನದ ಸಂಪೂರ್ಣ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ದೇವಾಲಯಕ್ಕಾಗಿ ದುಂಡಿಯುವ ಮಂದಿ ದುಡಿಮೆಗೆ ಮಾತ್ರ ಸೀಮಿತವಾಗಬಾರದು, ದೇವಾಲಯದಲ್ಲೂ ಇವರಿಗೆ ಸಮಾನ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ ಎಲ್ಲರೂ ಒಂದೇ ರೀತಿಯ ವಸ್ತ್ರವನ್ನು ಧರಿಸಿಕೊಂಡು ಬರುವಂತೆ ಬೈಲಾದಲ್ಲಿ ಸೂಚಿಸಲಾಗಿದೆ. ಶೋಷಿತ ವರ್ಗಕ್ಕೆ ಪ್ರಾರ್ಥನೆಗೆ ತೊಂದರೆಯಾಗಬಾರದು ಎನ್ನುವುದು ಸಮಿತಿಯ ಉದ್ದೇಶವಾಗಿದೆ. ಇದು ಹೊಸ ದೇವಾಲಯವಾಗಿದ್ದು, ಹೊಸ ಬೈಲಾವನ್ನು ರಚಿಸಲಾಗಿದೆ. ಅಷ್ಟಮಂಗಲ ಪ್ರಶ್ನೆಯ ಮೂಲಕವೇ ಎಲ್ಲರೂ ಒಗ್ಗೂಡಿ ಪುರಾತನ ದೇವಾಲಯವನ್ನು ನಿರ್ಮಿಸಿದ್ದೇವೆ ಮತ್ತು ದೇವಾಲಯಕ್ಕೆ ಹೆಸರು ಇಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಡಿ.27 ರಂದು ಗೊಂದಲ ಸೃಷ್ಟಿಯಾಗಿ ದೇವರ ಜಳಕ ಆಚರಣೆಗಳು ಪೊಲೀಸರ ಭದ್ರತೆಯಲ್ಲಿ ನಡೆಯಿತು. ಸುಮಾರು ಎರಡೂವರೆ ಸಾವಿರ ಭಕ್ತರು ಸಂಭ್ರಮದಿಂದ ಸೇರಿದ್ದರು. ಆದರೆ ಕೆಲವು ಮಂದಿಯಿಂದ ಉಂಟಾದ ಭಿನ್ನಾಭಿಪ್ರಾಯದಿಂದ ಅನೇಕ ಭಕ್ತರು ಬೇಸರದಿಂದ ಮರಳಿದರು ಎಂದು ಬೇಸರ ವ್ಯಕ್ತಪಡಿಸಿದರು. ಸಮಿತಿಯ ನಿರ್ದೇಶಕ ಎಂ.ಜಿ.ದೇವಪ್ಪ ಮಾತನಾಡಿ ಕಟ್ಟೆಮಾಡು ಗ್ರಾಮದಲ್ಲಿ ದುಡಿಮೆ ಮಾಡುವವರ ಸಂಖ್ಯೆ ಹೆಚ್ಚು ಇದೆ, ಸಾಂಪ್ರದಾಯಿಕ ಉಡುಪು ಧರಿಸಿ ಬಂದವರು ನಿಂತರೆ ಇತರರಿಗೆ ದೇವರನ್ನು ಕಾಣಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಎಲ್ಲರೂ ಪಂಚೆ, ಷರ್ಟ್ ಅಥವಾ ಪ್ಯಾಂಟ್, ಷರ್ಟ್ ಧರಿಸಿಕೊಂಡು ಬರಬೇಕು ಎಂದು ತಿಳಿಸಲಾಗಿದೆ. ಮಹಿಳೆಯರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದರು. 2015 ರಿಂದ ಎಲ್ಲಾ ಜಾತಿ ಜನಾಂಗದವರು ಒಗ್ಗೂಡಿ ದೇವಾಲಯವನ್ನು ಪರಿಶ್ರಮದಿಂದ ನಿರ್ಮಿಸಿದ್ದೇವೆ. ದೇವಾಲಯದಲ್ಲಿ ಸಮಾನತೆ ಇರಬೇಕು ಎನ್ನುವ ಉದ್ದೇಶಕ್ಕಾಗಿ ಸಾಂಪ್ರದಾಯಿಕ ಉಡುಪಿಗೆ ಅವಕಾಶ ನೀಡಿಲ್ಲ ಎಂದರು. ಸಮಿತಿ ಸದಸ್ಯ ವೇಣುಗೋಪಾಲ್ ಮಾತನಾಡಿ ಕಾವೇರಿ ನದಿಯ ಎರಡೂ ಬದಿಗಳಲ್ಲಿ ಶಿವನ ದೇವಾಲಯವಿದೆ, ಅಗಸ್ತ್ಯ ಮುನಿಗಳು ಮರಳಿನ ಲಿಂಗ ಮಾಡಿ ಮೃತ್ಯುಂಜಯ ಹೋಮ ಮಾಡಿದ ಕಾರಣಕ್ಕಾಗಿ ಈ ದೇವಾಲಯಕ್ಕೆ ಮೃತ್ಯುಂಜಯನ ಹೆಸರ ಬಂದಿದೆ ಎಂದು ಅಭಿಪ್ರಾಯಪಟ್ಟರು. ಉಪ ಕಾರ್ಯದರ್ಶಿ ಮಹೇಶ್ ಡಿ.ಕೆ, ನಿರ್ದೇಶಕರುಗಳಾದ ದೇವಿಪ್ರಸಾದ್ ಪಿ.ಎನ್ ಹಾಗೂ ಪುರುಷೋತ್ತಮ ಹೆಚ್.ಎಸ್ ಉಪಸ್ಥಿತರಿದ್ದರು.