ಮಡಿಕೇರಿ NEWS DESK ಜ.10 : ರಾಷ್ಟ್ರೀಯ ಹೆದ್ದಾರಿ ವಿಭಾಗ ವ್ಯಾಪ್ತಿಯ ಕೇಂದ್ರ ರಸ್ತೆ ನಿಧಿ ಮೂಲ ಸೌಕರ್ಯ ಯೋಜನೆಯಡಿ ವಿರಾಜಪೇಟೆ ಭಾಗದ ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿ 91 ರಡಿ 6 ಕೋಟಿ ರೂ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಲೋಕೋಪಯೋಗಿ ಸಚಿವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಸುಮಾರು 60 ಕೋಟಿ ರೂ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ಮೇಲೆ ಕ್ರಮವಹಿಸಲಾಗಿದೆ. ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಲೋಕೋಪಯೋಗಿ ಇಲಾಖೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ 163 ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಸುಮಾರು 705 ಕೋಟಿ ಹಾಗೂ ಉತ್ತರ ವಲಯದಲ್ಲಿ 132 ಕಾಮಗಾರಿ ಕೈಗೊಳ್ಳಲಾಗಿದ್ದು, ಸುಮಾರು 680 ಕೋಟಿ ರೂ ಮಂಜೂರಾತಿ ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 295 ಕಾಮಗಾರಿಯ 1991 ಕಿ.ಮೀ ಉದ್ದದ ಸುಮಾರು 1385 ಕೋಟಿ ರೂ ವೆಚ್ವದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಅಂತರ ರಾಜ್ಯ ಹೆದ್ದಾರಿ ಸಂಬಂಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು, ಈ ಹಿನ್ನೆಲೆ ರಸ್ತೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು. ನಂತರ ಸಚಿವರು ಮತ್ತು ಶಾಸಕರು ಮಾಕುಟ್ಟಗೆ ತೆರಳಿ ಅಂತರ ರಾಜ್ಯ ಗಡಿ ರಸ್ತೆ ವೀಕ್ಷಿಸಿದರು. ವಿರಾಜಪೇಟೆ ತಾಲ್ಲೂಕಿನ ಆನೆಚೌಕೂರು ಮೂಲಕ ಕೊಡಗು ಜಿಲ್ಲೆಗೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಶಾಸಕ ಎ.ಎಸ್.ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಸೇರಿದಂತೆ ಹಲ ಗಣ್ಯರು ಆತ್ಮೀಯವಾಗಿ ಸ್ವಾಗತಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮತ್ತಿತರರು ಇದ್ದರು.
::: ಅಭಿವೃದ್ಧಿಗೆ ಚಾಲನೆ :::
ಮಡಿಕೇರಿ-ಸೋಮವಾರಪೇಟೆಗೆ- ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಜ.11 ರಂದು ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಚಿವರು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ನಿರ್ಮಿಸಲಾಗಿರುವ ತಡೆಗೋಡೆಯ ಪರಿವೀಕ್ಷಣೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಐಗೂರು ಸೇತುವೆ ನಿರ್ಮಾಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 1.30 ಗಂಟೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವತಿಯಿಂದ ನಿರ್ಮಾಣವಾಗುತ್ತಿರುವ ಸೋಮವಾರಪೇಟೆ ತಾಲ್ಲೂಕಿನ ತೋಳೂರು ಶೆಟ್ಟಿಹಳ್ಳಿ ರಸ್ತೆ ಕಾಮಗಾರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ಸಿಐಆರ್‌ಎಫ್ ನಿಧಿಯಿಂದ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಪರಿವೀಕ್ಷಣೆ ಮಾಡಲಿದ್ದಾರೆ.