ಮಡಿಕೇರಿ ಜ.22 NEWS DESK : ಮೀನುಗಾರಿಕೆಯಲ್ಲಿ ಸಾಧನೆ ಮಾಡಿರುವ ಯುವ ಕೃಷಿಕ ಮಂದ್ರೀರ ತೇಜಸ್ ನಾಣಯ್ಯ ಅವರಿಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ದೊರೆತಿದ್ದು, ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಗ್ಗೋಡ್ಲು ಗ್ರಾಮದ ಮಂದ್ರೀರ ತೇಜಸ್ ನಾಣಯ್ಯ ಅವರು ಎಲ್‍ಎಲ್‍ಬಿ ಪದವೀಧರರಾಗಿದ್ದು, 20 ವರ್ಷಗಳಿಂದ ಸತತವಾಗಿ ಮೀನು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ಯುವ ರೈತ ಪ್ರಶಸ್ತಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನ್ಯಾಷನಲ್ ಫಿಶ್ ಫಾರ್ಮರ್ಸ್ ಡೇಯಂದು ಕಾಲೇಜ್ ಆಫ್ ಫಿಶರಿಶ್ ಮಂಗಳೂರು ಕೆವಿಎಎಎಫ್‍ಎಸ್‍ಯು ಬೀದರ್ ಅವರಿಂದ ಉತ್ತಮ ಮೀನು ಕೃಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಆರ್ಥಿಕ ಸಹಾಯ ಪಡೆದು ತಮ್ಮ ಸ್ವಂತ ಜಾಗದಲ್ಲಿ ಜೀವಂತ ಮೀನು ಮಾರಾಟ ಮಳಿಗೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರಲ್ಲಿ ಒಟ್ಟು 8 ಕೆರೆಗಳಿದ್ದು, ಎಲ್ಲಾ ಕೆರೆಯಲ್ಲಿ ವಿವಿಧ ರೀತಿಯ ಮೀನಿನ ತಳಿಗಳಿದ್ದು, ಜಿಲ್ಲಾ ಹಾಗೂ ಹೊರ ಜಿಲ್ಲೆಯವರಿಗೂ. ಜೀವಂತ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವರು ಆಕಾಶವಾಣಿ ಹಾಗೂ ದೂರದರ್ಶನ ಮತ್ತು ಯೂಟ್ಯೂಬ್‍ಗಳ ಮುಖಾಂತರ ಮೀನು ಕೃಷಿಕರಿಗೆ ಮಾಹಿತಿ ಹಾಗೂ ತರಬೇತಿ ನೀಡುತ್ತಿದ್ದಾರೆ.